ಬೆಂಗಳೂರು: ಕೆಲಸಕ್ಕಿದ್ದ ಮಳಿಗೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಜಾಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಹಾವೀರ್ ಸಿಂಗ್ (20) ಹಾಗೂ ಕುಲದೀಪ್ ಸಿಂಗ್ (20) ಬಂಧಿತರು.
ಬಂಧಿತರಿಂದ ₹45 ಲಕ್ಷ ಮೌಲ್ಯದ 429 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರರು ಠಾಣಾ ವ್ಯಾಪ್ತಿಯ ಮುತ್ಯಾಲನಗರದಲ್ಲಿ ಚಿನ್ನಾಭರಣ ಮಳಿಗೆ ನಡೆಸುತ್ತಿದ್ದಾರೆ. ಆ ಅಂಗಡಿಯಲ್ಲಿ ಆರೋಪಿಗಳಿಬ್ಬರೂ ಕೆಲಸಕ್ಕಿದ್ದರು. ಸೆ.26ರಂದು ದೂರುದಾರ ಹಾಗೂ ಅವರ ಪುತ್ರ ಊಟಕ್ಕೆಂದು ಮನೆಗೆ ತೆರಳಿದ್ದರು. ಆರೋಪಿಗಳಿಬ್ಬರೇ ಅಂಗಡಿಯಲ್ಲಿ ಇದ್ದರು. ಅದೇ ಸಂದರ್ಭದಲ್ಲಿ ಲಾಕರ್‌ನಲ್ಲಿದ್ದ 540 ಗ್ರಾಂ ಚಿನ್ನದ ಆಭರಣಗಳನ್ನು ಕದ್ದು ಆರೋಪಿಗಳು ಪರಾರಿ ಆಗಿದ್ದರು. ಕೃತ್ಯ ನಡೆದ ದಿನವೇ ಅಂಗಡಿ ಮಾಲೀಕರು ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಬೇರೆಡೆ ಕೆಲಸಕ್ಕೆ ಸೇರಿದ್ದರು: ಕೃತ್ಯ ಎಸಗಿದ ಬಳಿಕ ಆರೋಪಿಗಳು ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬಳಿಯಿರುವ ಮತ್ತೊಂದು ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದರು. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.