ADVERTISEMENT

ಬೆಂಗಳೂರಲ್ಲಿ ಕರಗ ಸಂಭ್ರಮ: ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ–ವಿಧಾನ

ಭಕ್ತರ ಹರ್ಷೋದ್ಗಾರ: ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ–ವಿಧಾನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 2:03 IST
Last Updated 7 ಏಪ್ರಿಲ್ 2023, 2:03 IST
ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಗುರುವಾರ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಅರ್ಚಕ ಜ್ಞಾನೇಂದ್ರ ಆಗಮಿಸಿದರು
ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಗುರುವಾರ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಅರ್ಚಕ ಜ್ಞಾನೇಂದ್ರ ಆಗಮಿಸಿದರು   

ಬೆಂಗಳೂರು: ಝಗಮಗಿಸುವ ದೀಪಾಲಂಕಾರ, ದೇವಾಲಯಕ್ಕೆ ವಿಶೇಷ ಅಲಂಕಾರ, ಪಾಂಡವರಿಗೆ ಹೂವಿನ ಹಾರ... ಇದರ ಮಧ್ಯೆ ಸಾವಿರಾರು ವೀರಕುಮಾರರು ಕೈಯಲ್ಲಿ ಕತ್ತಿ, ಗೋವಿಂದ... ಗೋವಿಂದ.. ಎಂಬ ಜಪ....

ತಿಗರಳಪೇಟೆ, ನಗರ್ತರಪೇಟೆ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯ ಮುಖ್ಯ ರಸ್ತೆ ಹಾಗೂ ಗಲ್ಲಿಗಲ್ಲಿಯೂ ಹಸಿರು ತೋರಣ. ಚೈತ್ರ ಪೌರ್ಣಿಮೆಯ ಬೆಳಕಿನಲ್ಲಿ ‌ಪ್ರತಿ ಮನೆಯ ಮುಂದೆ ನೀರು ಹಾಕಿ, ಸಾರಿಸಿ, ರಂಗೋಲಿ ಹಾಕುವ ಸಡಗರ. ಇದು ಬೆಂಗಳೂರು ಪ್ರಸಿದ್ಧ ಕರಗ ಶಕ್ತ್ಯೋತ್ಸವ ಸಂಭ್ರಮದ ನೋಟ.

ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಅಂಗವಾಗಿ ನಗರದ ಪೇಟೆ ಬೀದಿಗಳಲ್ಲಿ ಮಾರ್ಚ್‌ 29ರಿಂದಲೇ ಸಿದ್ಧತೆ ನಡೆದಿತ್ತು. ಗುರುವಾರ ಪೌರ್ಣಿಮೆಯಂದು ಹೂವಿನ ಕರಗದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಈ ಪ್ರದೇಶಗಳಲ್ಲಿ ಸಂಭ್ರಮವಿತ್ತು. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಹಸಿ ಕರಗದ ಪೂಜೆ ಸೇರಿದಂತೆ ವಿವಿಧ ರೀತಿಯ ಪೂಜೆಗಳು ನಡೆದವು. ಅರ್ಚಕ ಜ್ಞಾನೇಂದ್ರ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ADVERTISEMENT

ಧರ್ಮರಾಯಸ್ವಾಮಿ ದೇವಸ್ಥಾನ ಹೊರಭಾಗದಲ್ಲಿ ಕರ್ಪೂರ ಸೇವೆ ನಡೆಯಿತು. ವರ್ಷಗಳಿಂದ ಹೊತ್ತಿದ್ದ ಹರಕೆ ತೀರಿಸಲು ಸಣ್ಣ ಕರ್ಪೂರಗಳು ಸೇರಿದಂತೆ ಬೃಹತ್‌ ಗಾತ್ರದ ಕರ್ಪೂರಗಳ ಆರತಿ ಮಾಡಿದರು. ಕರಗದ ಮುಂದೆ ಸಾಗುವ ಎಲ್ಲ ವಯೋಮಾನದ ವೀರಕುಮಾರರು, ಸಂಜೆಯಿಂದಲೇ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬಂದು ಸೇರಿದ್ದರು. ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ತೇರುಗಳು ಧರ್ಮರಾಯ ಸ್ವಾಮಿ ಮಹಾರಥೋತ್ಸವ ಹಿಂದೆ ಸಾಗಲು ಜೆ.ಸಿ.ರಸ್ತೆ, ಟೌನ್‌ ಹಾನ್‌ಗಳಲ್ಲಿ ನಿಂತಿದ್ದವು.

ಝಗಮಗಿಸುವ ಬೆಳಕು, ಓಲಗದ ಸದ್ದು ಇಡೀ ಪೇಟೆಯನ್ನೇ ಆವರಿಸಿಕೊಂಡಿತ್ತು. ತಡರಾತ್ರಿ ಮಲ್ಲಿಗೆಯ ಪರಿಮಳ ಹರಡುತ್ತ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗದ ಮೆರವಣಿಗೆ ಹೊರಟಿತು. ಕರಗ ಹೊರ ಬಂದ ಕೂಡಲೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಏಳು ಸುತ್ತಿನ ಕೋಟೆಯಂತೆ ಒಂದರೊಳಗೊಂದು ಪೇಟೆಗಳು ಬೆರೆತು ಕಿಷ್ಕಿಂಧೆಯಂತೆ ಇರುವ ಈ ಪ್ರದೇಶದ ಪ್ರತಿ ಗಲ್ಲಿಯಲ್ಲೂ ಜನಸಾಗರ ತುಂಬಿ ತುಳುಕುತ್ತಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು.

ತಿಗಳರಪೇಟೆ ಸೇರಿ ಕರಗ ಸಾಗುವ ಮಾರ್ಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ತಲುಪುವ ದೇವಸ್ಥಾನಗಳನ್ನು ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.

ಪ್ರಸಾದ ವಿನಿಯೋಗ: ಅವೆನ್ಯೂ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್‌ ರಸ್ತೆ ಸುತ್ತಮುತ್ತ ಹಾಗೂ ಕರಗ ಸಾಗುವ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಪುಲಾವ್‌, ಬಿಸಿ ಬೇಳೆ ಬಾತ್‌ ಸೇರಿ ವಿವಿಧ ರೀತಿಯ ಪ್ರಸಾದ ವಿತರಿಸಲಾಯಿತು. ಕರಗ ನೋಡಲು ಬಂದ ಭಕ್ತರಿಗೆ ಪಾನಕ, ಮಜ್ಜಿಗೆಯನ್ನೂ ನೀಡಲಾಯಿತು.

ಜಾತ್ರೆಯ ಸಂಭ್ರಮ: ನಗರ್ತಪೇಟೆ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳ ಇಕ್ಕೆಲಗಳಲ್ಲಿ ಆಟಿಕೆ, ಫ್ಯಾನ್ಸಿ ವಸ್ತುಗಳು, ತಿಂಡಿ ತಿನಿಸುಗಳನ್ನು ಬೀದಿಬದಿ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.