ADVERTISEMENT

ಆರೋಗ್ಯಕ್ಕೆ ‘ಅಮೃತ’ದ ಕೊನೆ ಹನಿ

ನಗರೋತ್ಥಾನದಲ್ಲಿ ವೈದ್ಯಕೀಯ ಸೌಲಭ್ಯಕ್ಕೆ ಕಡೇ ಸ್ಥಾನ; ₹123 ಕೋಟಿಗೆ ಸಮ್ಮತಿ

Published 21 ಜುಲೈ 2022, 19:57 IST
Last Updated 21 ಜುಲೈ 2022, 19:57 IST
ಬೆಂಗಳೂರಿನ ಆಸ್ಟಿನ್‌ ಟೌನ್‌ನಲ್ಲಿರುವ ಬಿಬಿಎಂಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಜಾವಾಣಿ ಚಿತ್ರ/ರಂಜು ಪಿ.
ಬೆಂಗಳೂರಿನ ಆಸ್ಟಿನ್‌ ಟೌನ್‌ನಲ್ಲಿರುವ ಬಿಬಿಎಂಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ‘ಆರೋಗ್ಯವೇ ಭಾಗ್ಯ, ಯಾರೂ ವೈದ್ಯಕೀಯ ಚಿಕಿತ್ಸೆಗೆ ಚಿಂತೆ ಮಾಡಬೇಕಿಲ್ಲ, ಪ್ರತಿಯೊಬ್ಬರಿಗೂ ಸಿಗಲಿದೆ ಹೈಟೆಕ್‌ ಚಿಕಿತ್ಸೆ...‘ ಇಂತಹ ಭರವಸೆಯ ಮಾತುಗಳನ್ನು ಜನರು ಕೇಳುತ್ತಲೇ ಇದ್ದಾರೆ. ಆದರೆ ಸೌಲಭ್ಯ ನೀಡುವ ವ್ಯವಸ್ಥೆ ಇನ್ನೂ ಹಸನಾಗಿಲ್ಲ. ಇದಕ್ಕೆ ಕಾರಣ–ಆರ್ಥಿಕ ಮುಗ್ಗಟ್ಟು. ಅಮೃತ ನಗರೋತ್ಥಾನದಲ್ಲಿ ಆರೋಗ್ಯ ವಿಭಾಗಕ್ಕೆ ಸಿಕ್ಕಿರುವ ಮೊತ್ತವೇ ಅದಕ್ಕೆ ಸಾಕ್ಷಿ.

ರಸ್ತೆ, ಡಾಂಬರು, ಚರಂಡಿ ಮತ್ತು ಶಾಸಕರ ವಿವೇಚನೆಯ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದ ಮೇಲೆ ₹6 ಸಾವಿರ ಕೋಟಿಯ ‘ಅಮೃತ ನಗರೋತ್ಥಾನ’ದ ಉಳಿದ ಹಣವನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ಮುಖ್ಯಮಂತ್ರಿ ಹಂಚಿದ್ದಾರೆ. ‌ಅನುದಾನ ನೀಡಿರುವ ಪ್ರಮಾಣದಲ್ಲಿ ಆರೋಗ್ಯ ಕ್ಷೇತ್ರ ಕೊನೆಯದಾಗಿದೆ. ₹123.3 ಕೋಟಿ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ.

‘ಜನರು ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕುತ್ತಾರೆ. ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ, ರೆಫರಲ್‌ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳೇ ಇಲ್ಲ. ಆಸ್ಪತ್ರೆಗಳ ಪ್ರವೇಶದಲ್ಲೇ ಶುಚಿತ್ವ ಇಲ್ಲದಿರುವುದು ಕಣ್ಣಿಗೆ ರಾಚುತ್ತದೆ. ಇನ್ನು ಒಳಭಾಗವಂತೂ ದೇವರಿಗೇ ಪ್ರೀತಿ. ಕುರ್ಚಿಗಳು, ಟೇಬಲ್‌ಗಳು, ಉಪಕರಣಗಳು ಹಾಳಾಗಿರುತ್ತವೆ. ಅವುಗಳ ಮೇಲೆ ಕೂರಲೂ ಸಾಧ್ಯವಾಗದಂತಹ ಸ್ಥಿತಿ. ಇಂತಹ ಆಸ್ಪತ್ರೆಗೆ ಯಾರುತಾನೆ ಹೋಗಲು ಇಷ್ಟಪಡುತ್ತಾರೆ ಹೇಳಿ’ ಎಂದು ನಾಯಂಡಹಳ್ಳಿ ನಿವಾಸಿ ರಾಜು ಪ್ರಶ್ನಿಸುತ್ತಾರೆ.

ADVERTISEMENT

‘ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಇರುವುದೇ ಅಪರೂಪ. ಅವರಿಗಾಗಿ ಕಾಯಬೇಕಾಗಿದೆ. ಒತ್ತಾಯಪಡಿಸಿ ಕೇಳಿದರೆ, ಕಟ್ಟಡ ವೀಕ್ಷಣೆಗೆ ಹೋಗಿದ್ದಾರೆ ಎನ್ನುತ್ತಾರೆ. ಟ್ರೇಡ್‌ ಲೈಸೆನ್ಸ್ ಅನ್ನು ವೈದ್ಯ ವಿಭಾಗ ನೀಡುವುದರಿಂದ ಬಹುತೇಕ ಸಿಬ್ಬಂದಿ ಅದರತ್ತಲೇ ಹೆಚ್ಚು ಕಾಳಜಿ ವಹಿಸುತ್ತಾರೆ’ ಎಂದು ವಿಜಯನಗರದ ರಾಜಶೇಖರ್‌ ದೂರಿದರು.

ಅಮೃತ ನಗರೋತ್ಥಾನದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ, ಕಟ್ಟಡ ದುರಸ್ತಿ, ಉಪಕರಣಗಳನ್ನು ಒದಗಿಸಲಾಗುತ್ತಿದೆ. ಉನ್ನತ ಚಿಕಿತ್ಸೆ ನೀಡಲು ಈಗ ನೀಡಿರುವ ಹಣ ಏನೂ ಸಾಲದು ಎಂಬುದು ತಜ್ಞರ ಅಭಿಪ್ರಾಯ.

ಕಾಮಗಾರಿಗಳು: ಪೂರ್ವ ವಲಯದಲ್ಲಿ ಒಂದು ರೆಫರಲ್‌ ಹಾಗೂ 5 ಹೆರಿಗೆ ಆಸ್ಪತ್ರೆ ದುರಸ್ತಿ, ಹೊಸ ಕಟ್ಟಡಕ್ಕಾಗಿ ₹10 ಕೋಟಿ; ಕ್ಲಿನಿಕಲ್‌ ವಿಭಾಗದ 2 ರೆಫರಲ್‌ ಮತ್ತು 10 ಹೆರಿಗೆ ಆಸ್ಪತ್ರೆ, 1 ಡಯಾಲಿಸಿಸ್‌ ಕೇಂದ್ರ ಲ್ಯಾಬ್‌, ವಸತಿ ಗೃಹಗಳ ದುರಸ್ತಿಗೆ ₹6 ಕೋಟಿ; ಪಶ್ಚಿಮ ವಲಯದ 10 ಕ್ಲಿನಿಕಲ್‌ ಆಸ್ಪತ್ರೆ ದುರಸ್ತಿಗೆ ₹12.8 ಕೋಟಿ; ಉಪಕರಣಗಳು ಮತ್ತು ಸಲಕರಣೆಗಳಿಗೆ ₹8 ಕೋಟಿ ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ.

‘ನಮ್ಮ ಕ್ಲಿನಿಕ್‌’ಗಳಿಗೆ ತಲಾ ₹36 ಲಕ್ಷ

ಬಿಬಿಎಂಪಿ ಎಲ್ಲ 243 ವಾರ್ಡ್‌ಗಳಲ್ಲಿ ‘ನಮ್ಮ ಕ್ಲಿನಿಕ್‌’ಗಳನ್ನು ತೆರೆಯುತ್ತಿರು
ವುದು ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಸಮಾಧಾನಕಾರ ಕೊಡುಗೆ. ಆದರೆ ಇದಕ್ಕೆ ‘ಅಮೃತ ನಗರೋತ್ಥಾನ’ ಯೋಜನೆಯಲ್ಲಿ ಹಣ ಸಿಕ್ಕಿಲ್ಲ. 15ನೇ ಹಣಕಾಸು ಆಯೋಗದ ನಿಧಿಯಲ್ಲಿ ವೆಚ್ಚ ಮಾಡಲಾಗುತ್ತದೆ. ಪ್ರತಿ ಕ್ಲಿನಿಕ್‌ಗೂ ಪ್ರತಿ ವರ್ಷ ₹36 ಲಕ್ಷ ವೆಚ್ಚ ಮಾಡಲಾಗುತ್ತದೆ. ಪಾಲಿಕೆಯ ವಾರ್ಡ್‌ಗಳಲ್ಲಿರುವ ತನ್ನ ಸ್ವಂತ ಜಾಗದಲ್ಲಿ ಈ ಕ್ಲಿನಿಕ್‌ಗಳು ಆರಂಭವಾಗಲಿವೆ. ಸ್ವಂತ ಕಟ್ಟಡ ಇಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗುತ್ತದೆ. ಈ ಕ್ಲಿನಿಕ್‌ಗಳಲ್ಲಿ ತಪಾಸಣೆ ಹಾಗೂ ಪ್ರಾಥಮಿಕ ಚಿಕಿತ್ಸೆಗಳು ಲಭ್ಯ ಇರುತ್ತವೆ.

ಹೆಚ್ಚಿನ ಸೌಲಭ್ಯ

ಬಿಬಿಎಂಪಿ ವ್ಯಾಪ್ತಿಯಲ್ಲಿ 140 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಿಗೆ ಮೂಲಸೌಕರ್ಯ ಒದಗಿಸುವ ಜೊತೆಗೆ, ಉನ್ನತೀಕರಣದ ಕೆಲಸವಾಗಲಿದೆ. ಅಲ್ಲದೆ 50 ಹೊಸ ಪ್ರಾಥಮಿಕ ಕೇಂದ್ರಗಳನ್ನೂ ಆರಂಭಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯ ನೀಡುವುದು ಗುರಿಯಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ ಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.