ADVERTISEMENT

ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಕೊಲೆ ಪ್ರಕರಣ; ಇಬ್ಬರು ಆರೋಪಿಗಳು ಬಂಧನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 15:16 IST
Last Updated 25 ಆಗಸ್ಟ್ 2025, 15:16 IST
ಆಕಾಶ್‌ 
ಆಕಾಶ್‌    

ಬೆಂಗಳೂರು: ಕುಂಬಳಗೋಡು ಕೈಗಾರಿಕಾ ಪ್ರದೇಶದ ಎಸ್‌.ವಿ. ಕಾಂಕ್ರೀಟ್‌ ಪ್ಲಾಂಟ್‌ ಬಳಿ ನಡೆದ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಕುಂಬಳಗೋಡು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಅಮಿತ್‌ (25) ಕೊಲೆಯಾದ ವ್ಯಕ್ತಿ.

ಕೊಲೆ ಆರೋಪದಡಿ ಆಕಾಶ್‌ ಹಾಗೂ ರವಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಪ್ಲಾಂಟ್‌ನ ಉಸ್ತುವಾರಿ ಎಚ್‌.ಎನ್‌.ರೋಹಿತ್ ಅವರು ನೀಡಿದ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಭಾನುವಾರ ರಜೆಯಿದ್ದ ಕಾರಣಕ್ಕೆ ಕೆಲಸಕ್ಕೆ ತೆರಳಿರಲಿಲ್ಲ. ನಗರದ ಜ್ಞಾನಭಾರತಿ ಸಮೀಪ ತೆರಳುತ್ತಿರುವಾಗ ಪ್ಲಾಂಟ್‌ನ ದಾಸ್ತಾನು ವಿಭಾಗದ ಉಸ್ತುವಾರಿ ವಿಜಯ್‌ ಅವರು ಕರೆ ಮಾಡಿದ್ದರು. ಪ್ಲಾಂಟ್‌ನ ಕೆಲಸಗಾರ ರವಿಯೊಂದಿಗೆ ಇಬ್ಬರು ಬಂದು ಗಲಾಟೆ ನಡೆಸುತ್ತಿದ್ದಾರೆ. ಮದ್ಯ ಸೇವನೆ ಮಾಡಿರುವಂತೆ ಕಂಡುಬರುತ್ತಿದೆ ಎಂಬುದಾಗಿ ಮಾಹಿತಿ ನೀಡಿದ್ದರು. ತಕ್ಷಣವೇ ಆರೋಪಿ ರವಿಗೆ ಕರೆ ಮಾಡಿ, ‘ನಿನ್ನ ಜತೆಗೆ ಬಂದಿರುವ ಇಬ್ಬರನ್ನು ಹೊರಕ್ಕೆ ಕಳುಹಿಸುವಂತೆ ಸೂಚಿಸಿದ್ದೆ’. ಪ್ಲಾಂಟ್‌ನ ಗುಣಮಟ್ಟ ವಿಭಾಗದ ಎಂಜಿನಿಯರ್‌ ನವನೀತ್ ಅವರು ಮತ್ತೆ ಕರೆ ಮಾಡಿ, ರವಿಯೊಂದಿಗೆ ಬಂದಿರುವವರ ಪೈಕಿ ಒಬ್ಬನಿಗೆ ಗಾಯವಾಗಿದೆ ಎಂದು ತಿಳಿಸಿದ್ದರು. ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅಮಿತ್ ಎಂಬಾತ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು’ ಎಂದು ರೋಹಿತ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ. ಯಾವ ಕಾರಣದಿಂದ ಕೊಲೆ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಮದ್ಯದ ಅಮಲಿನಲ್ಲಿ ಗಲಾಟೆ ನಡೆದು ಕೃತ್ಯ ಎಸಗಿರುವಂತೆ ಕಾಣಿಸುತ್ತಿದೆ’ ಎಂದು ಪೊಲೀಸರು ಹೇಳಿದರು.

ರವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.