ADVERTISEMENT

ಆನೇಕಲ್‌ | ಶೀಲ ಶಂಕೆ: ಪತ್ನಿ ರುಂಡ ಕತ್ತರಿಸಿ ಠಾಣೆಗೆ ತಂದ ಪತಿ

ಮಚ್ಚಿನಿಂದ ಕತ್ತರಿಸಿ ಬರ್ಬರ ಹತ್ಯೆ* ಮನೆಯಲ್ಲಿಯೇ ಇತ್ತು ಮುಂಡ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 23:30 IST
Last Updated 7 ಜೂನ್ 2025, 23:30 IST
ಶಂಕರ್‌, ಮಾನಸ ದಂಪತಿ
ಶಂಕರ್‌, ಮಾನಸ ದಂಪತಿ   

ಆನೇಕಲ್: ತಾಲ್ಲೂಕಿನ ಚಂದಾಪುರ ಬಳಿಯ ಹೀಲಲಿಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಜಗಳದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ರುಂಡವನ್ನು ಮಚ್ಚಿನಿಂದ ಕತ್ತರಿಸಿದ್ದಾನೆ. ನಂತರ ರುಂಡವನ್ನು ಸ್ಕೂಟರ್‌ನಲ್ಲಿಟ್ಟುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

ಹೆಬ್ಬಗೋಡಿ ನಿವಾಸಿ ಮಾನಸ (26) ರುಂಡವನ್ನು ಆಕೆಯ ಪತಿ ಶಂಕರ್‌ (28) ಮಚ್ಚಿನಿಂದ ಕತ್ತರಿಸಿದ್ದು, ರುಂಡದೊಂದಿಗೆ ಸೂರ್ಯಸಿಟಿ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ. ತಾನೇ ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. 

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಮಾನಸ ಬೊಮ್ಮಸಂದ್ರದಲ್ಲಿ ಮತ್ತು ಶಂಕರ್‌ ಕೋರಮಂಗಲದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.      

ADVERTISEMENT

‘ನನ್ನ ಪತ್ನಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮುಗಿಲನ್‌ ಎಂಬಾತನ ಜೊತೆ ಪತ್ನಿಗೆ ಸಲುಗೆ ಇತ್ತು. ಮುಗಿಲನ್‌ ಆಗಾಗ ಮಾನಸ ಮನೆಗೂ ಹೋಗುತ್ತಿದ್ದ. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಇದೇ ವಿಷಯವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು’ ಎಂದು ಶಂಕರ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

‘ಜೂನ್ 3ರಂದು ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮರುದಿನ ಬರುವುದಾಗಿ ಹೇಳಿ ಕಂಪನಿ ಕೆಲಸಕ್ಕೆ ಹೋಗಿದ್ದೆ. ರಾತ್ರಿ ಪಾಳಿ ಮುಗಿಸಿ ತಡರಾತ್ರಿಯೇ ಹೀಲಲಿಗೆ ಮನೆಗೆ ಮರಳಿದ್ದೆ. ಮನೆಯಲ್ಲಿ ಮಾನಸ ತನ್ನ ಪ್ರಿಯಕರನೊಂದಿಗೆ ಇದ್ದುದ್ದನ್ನು ಕಂಡು ಕೋಪ ಬಂತು. ಇಬ್ಬರ ಮೇಲೆ ಹಲ್ಲೆ ನಡೆಸಿದೆ. ಮುಗಿಲನ್‌ ತಪ್ಪಿಸಿಕೊಂಡ. ಈ ಘಟನೆ ನಂತರ ಪ್ರಿಯಕರನೊಂದಿಗೆ ಹೋಗಲು ಹೇಳಿ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.

ತವರು ಮನೆಗೆ ಹೋಗುವುದಾಗಿ ಹೇಳಿದ್ದ ಮಾನಸ ಮೂರು ದಿನ ಪಿ.ಜಿಯೊಂದರಲ್ಲಿ ವಾಸವಿದ್ದರು. ಪ್ರತಿದಿನ ಮನೆಗೆ ಬಂದು ಮನೆಗೆ ಸೇರಿಸಿಕೊಳ್ಳುವಂತೆ ಪೀಡಿಸುತ್ತಿದ್ದಳು. ಅದೇ ರೀತಿ ಶುಕ್ರವಾರ ರಾತ್ರಿ 8ಕ್ಕೆ ಬಂದ ಮಾನಸ ಮನೆಗೆ ಸೇರಿಸಿಕೊಳ್ಳುವಂತೆ ಕೇಳಿಕೊಂಡಿದ್ದಳು. ಮಗಳ ಭವಿಷ್ಯದ ದೃಷ್ಟಿಯಿಂದ ದಂಪತಿ ಪರಸ್ಪರ ಸಂಧಾನ ಮಾಡಿಕೊಂಡಿದ್ದರು.

ಬಳಿಕ ಮಾತುಕತೆ ವೇಳೆ, ಮುಗಿಲನ್‌ ಜೊತೆ ಹೇಗೆ ಸಂಬಂಧ ಬೆಳೆಯಿತು ಎಂದು ಶಂಕರ್ ಪ್ರಶ್ನಿಸಿದ್ದ. ಇದು, ವಿಕೋಪಕ್ಕೆ ಹೋಗಿ, ಕೊಲೆ ಮಾಡಲೆಂದೇ ಖರೀದಿಸಿ ಮನೆಯಲ್ಲಿ ತಂದಿಟ್ಟುಕೊಂಡಿದ್ದ ಮಚ್ಚಿನಿಂದ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಮುಂಡ ಮತ್ತು ಠಾಣೆಗೆ ತಂದಿದ್ದ ರುಂಡವನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ನಡೆಯತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.