ADVERTISEMENT

ಬೆಂಗಳೂರು | ಸ್ನಾತಕೋತ್ತರ ಪರೀಕ್ಷೆ: ಸಾಮೂಹಿಕ ನಕಲು

ಬೆಂಗಳೂರು ನಗರ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಕಲಾ ಕಾಲೇಜು

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:40 IST
Last Updated 15 ಜೂನ್ 2022, 20:40 IST
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಕಲು ಚೀಟಿ ಪರೀಶಿಲಿಸಿದ ಜಾಗೃತದಳದ ಸಿಬ್ಬಂದಿ
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಕಲು ಚೀಟಿ ಪರೀಶಿಲಿಸಿದ ಜಾಗೃತದಳದ ಸಿಬ್ಬಂದಿ   

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ (ಅಂಬೇಡ್ಕರ್‌ ರಸ್ತೆ) ಬುಧವಾರ ನಡೆದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವುದು ಬೆಳಕಿಗೆ ಬಂದಿದೆ.

ಅರ್ಥಶಾಸ್ತ್ರ (ಅಡ್ವಾನ್ಸ್ಡ್‌ ಮ್ಯಾಕ್ರೋ ಎಕನಾಮಿಕ್ಸ್‌ 1), ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಭಾಗದ ಪ್ರಥಮ ಸೆಮಿಸ್ಟರ್‌ ಪರೀಕ್ಷೆಗಳಲ್ಲಿ ನಕಲು ನಡೆದಿದೆ.

ಜೆರಾಕ್ಸ್‌ ಪ್ರತಿ, ನೋಟ್‌ಬುಕ್‌ ಹಾಳೆಗಳನ್ನೇ ಪರೀಕ್ಷಾ ಕೊಠಡಿಗೆ ಕೊಂಡೊಯ್ದು ಉತ್ತರ ಬರೆಯುತ್ತಿದ್ದ ವಿದ್ಯಾರ್ಥಿಗಳು, ಪರೀಕ್ಷಾ ಜಾಗೃತ ದಳದ (ಸ್ಕ್ವಾಡ್‌) ಸಿಬ್ಬಂದಿಗೆ ಸಿಕ್ಕಿಬಿದ್ದರೂ ಅಕ್ರಮ ಎಸಗಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದು ಚರ್ಚೆಗೆ ಕಾರಣವಾಗಿದೆ.

ADVERTISEMENT

ವಿದ್ಯಾರ್ಥಿಯೊಬ್ಬ 49 ಚೀಟಿಗಳನ್ನು ತಂದು ನಕಲು ಮಾಡುತ್ತಿದ್ದ. ಕೊಠಡಿಯಲ್ಲಿ ಮೊಬೈಲ್‌ ಸಹ ಪತ್ತೆಯಾಗಿದೆ. ವಿಜಯ ಕಾಲೇಜಿನ ಕೃಷ್ಣಮೂರ್ತಿ ಹಾಗೂ ಮೋಹನ್‌ ಅವರು ದಿಢೀರ್‌ ಪರಿಶೀಲ
ನೆಗೆ ತೆರಳಿದಾಗ ಈ ಅಕ್ರಮಗಳು ನಡೆದಿರುವುದು ಪತ್ತೆಯಾಗಿವೆ.

ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಕಾಲೇಜಿನ ಪ್ರಾಧ್ಯಾಪಕರೇ ಮನವಿ ಮಾಡುತ್ತಿರುವ ವಿಡಿಯೊ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದರೂ ಪ್ರಾಂಶುಪಾಲರು ಕಾಲೇಜಿನಲ್ಲಿ ಇರಲಿಲ್ಲ ಎಂಬ ಆರೋಪವಿದೆ. ಅವರು ಸ್ನೇಹಿತರೊಬ್ಬರ ಮನೆಯಲ್ಲಿ ನಿಗದಿಯಾಗಿದ್ದ ಸಮಾರಂಭಕ್ಕೆ ತೆರಳಿದ್ದರು. ಕಾಲೇಜಿನಲ್ಲಿ ಯಾರಿಗೂ ಜವಾಬ್ದಾರಿ ವಹಿಸಿರಲಿಲ್ಲ ಎಂದು ‘ಪ್ರಜಾವಾಣಿ’ಗೆ ಮೂಲಗಳು ತಿಳಿಸಿವೆ.

‘ಇವರೆಲ್ಲರೂ ಭವಿಷ್ಯದಲ್ಲಿ ಉಪನ್ಯಾಸಕರಾಗಿ ಬರುತ್ತಾರೆ. ಸಾಮೂಹಿಕ ನಕಲು ನಡೆಸಿ ಉತ್ತೀರ್ಣ
ರಾದರೆ ಹೇಗೆ’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಜೂನ್‌ 13ರಿಂದ ಪರೀಕ್ಷೆಗಳು ಆರಂಭವಾಗಿದ್ದವು. ಮೊದಲ ದಿನ ಬೆಳಿಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಪರೀಕ್ಷೆ 11.30ಕ್ಕೆ ಆರಂಭವಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.

‘ಮೊದಲ ದಿನದ ಕೆಲವು ವಿಷಯದ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಬದಲಿ ಪ್ರಶ್ನೆಪತ್ರಿಕೆ ಒದಗಿಸುವ ಕಾರಣಕ್ಕೆ ಪರೀಕ್ಷೆ ವಿಳಂಬವಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಮಧ್ಯಾಹ್ನ 1ಕ್ಕೆ ಮುಕ್ತಾಯವಾಗಬೇಕಿದ್ದ ಪರೀಕ್ಷೆ 2.30ಕ್ಕೆ ಮುಕ್ತಾಯಗೊಂಡಿತ್ತು. ಮಧ್ಯಾಹ್ನ 3.30ರ ವೇಳೆಗೆ ಉತ್ತರ ಪತ್ರಿಕೆಗಳನ್ನುಕೊಂಡೊಯ್ಯಲಾಗಿತ್ತು. ಈ ವಿಷಯವುಬಹಿರಂಗವಾಗದಂತೆ, ಸಿಂಡಿಕೇಟ್‌ ಸದಸ್ಯರಿಗೂ ತಿಳಿಯದಂತೆ ವಿ.ವಿ ಎಚ್ಚರಿಕೆ ವಹಿಸಿತ್ತು.

‘ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂಬ ಆಗ್ರಹ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.