ನಮ್ಮ ಮೆಟ್ರೊ
‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಹೆಚ್ಚಳ ಎಷ್ಟು ಮಾಡಿದೆ ಎಂಬ ಬಗ್ಗೆ ಲೆಕ್ಕಾಚಾರ ಇಲ್ಲದೇ ಮೆಟ್ರೊದಲ್ಲಿ ಪ್ರಯಾಣಿಸಿದಾಗ ಬೆಲೆ ದುಪ್ಪಟ್ಟಾಗಿರುವುದನ್ನು ಕಂಡು ಪ್ರಯಾಣಿಕರು ಅವಕ್ಕಾಗಿದ್ದಾರೆ. ದುಬಾರಿ ದರ ನಿಗದಿ ಮಾಡಿರುವುದನ್ನು ಖಂಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
‘ನಮ್ಮ ಮೆಟ್ರೊ’ ಪ್ರಯಾಣ ದರ ಶೇಕಡ 47ರಷ್ಟಲ್ಲ, ಕೆಲವು ಕಡೆ ಶೇ 80 ರಿಂದ 100ರಷ್ಟು ಏರಿಕೆಯಾಗಿದೆ. ನಾನು ಪ್ರತಿ ದಿನ ಮೆಟ್ರೊ ರೈಲಿನಲ್ಲಿ ಮೈಸೂರು ರಸ್ತೆ ನಿಲ್ದಾಣದಿಂದ ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ₹26 ಕೊಟ್ಟು ಪ್ರಯಾಣಿಸುತ್ತಿದ್ದೆ. ಈಗ ಇಷ್ಟೇ ದೂರಕ್ಕೆ ₹47 ಕೊಡಬೇಕಾಗಿದೆ. ಅಂದರೆ ದರ ಶೇ 80ರಷ್ಟು ಏರಿಕೆಯಾದಂತಾಯಿತು. ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಎಂದು ಬಿಜೆಪಿಯವರು, ಕೇಂದ್ರ ಸರ್ಕಾರ ಕಾರಣವೆಂದು ಕಾಂಗ್ರೆಸ್‌ನವರು ದೂಷಿಸುತ್ತಾ ಜನರನ್ನು ಮಂಗ ಮಾಡುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರನ್ನು ಹೀಗೆ ಲೂಟಿ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಅಷ್ಟಕ್ಕೂ ನಮ್ಮ ಮೆಟ್ರೊ ನಷ್ಟದಲ್ಲಿದೆಯೇ?
ಜವರಾಯಿಗೌಡ, ನಾಗರಬಾವಿ ಬಡಾವಣೆ
ಮೆಟ್ರೊ ಪ್ರಯಾಣದಿಂದ ಸಮಯ ಉಳಿತಾಯವಾಗುವ ಜೊತೆಗೆ ಸಕಾಲಕ್ಕೆ ಗಮ್ಯ ತಲುಪುವ ಭರವಸೆ ಇರುತ್ತದೆ. ಹಾಗಾಗಿ ನಾನು ತುರ್ತು ಸಂದರ್ಭಗಳಲ್ಲಿ ಮೆಟ್ರೊ ರೈಲಿನಲ್ಲಿ ಸಂಚರಿಸುತ್ತಿದ್ದೆ. ಈಗ ಪ್ರಯಾಣ ದರ ಏರಿಸಿದ್ದಾರೆ. ಇನ್ನು ಮುಂದೆ ಇದೇ ಖರ್ಚಲ್ಲಿ ಆಟೊದಲ್ಲಿ ಓಡಾಡಬಹುದು. ಅದೇ ಹಣದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸ್ವಲ್ಪ ಮುಂಚಿತವಾಗಿ ಮನೆಯಿಂದ ಹೊರಡುತ್ತೇನೆ. ಹೀಗೆ ಬರೆಯ ಮೇಲೆ ಬರೆ ಹಾಕುವ ಸರ್ಕಾರದ ನಿಲುವು ಎಷ್ಟು ಸರಿ?
ಮಂಜುಳಾ ಎಚ್.ವಿ, ಬೆಂಗಳೂರು
ಎಚ್.ವಿ.ಮಂಜುಳಾ ಬೆಂಗಳೂರು
ಸಾರ್ವಜನಿಕ ಸಾರಿಗೆ ಸಂಚಾರ ಯಾವಾಗಲೂ ಕಡಿಮೆ ದರದಲ್ಲಿ ಇದ್ದರೆ ಅದು ಜನರಿಗೆ ಅನುಕೂಲಕರ. ನಗರದ ದಟ್ಟಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಯಾವುದೇ ಸರ್ಕಾರವಾಗಲಿ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಉತ್ತೇಜನ ನೀಡಬೇಕು. ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಹೀಗೆ ಮೆಟ್ರೊ ರೈಲು, ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಕ್ರಮ ಒಳ್ಳೆಯದಲ್ಲ.
ಸಿದ್ದಣ್ಣ ಪೂಜಾರಿ,
ಸಿದ್ದಣ್ಣ ಪೂಜಾರಿ
ಮೆಟ್ರೊ ರೈಲು ಪ್ರಯಾಣ ದರವನ್ನು ಪ್ರತಿ ವರ್ಷ ಶೇಕಡ 5ರಷ್ಟು ಏರಿಕೆ ಮಾಡುತ್ತಾ ಬಂದಿದ್ದರೆ ಜನರಿಗೆ ಇಷ್ಟೊಂದು ಹೊರೆ ಅನಿಸುತ್ತಿರಲಿಲ್ಲ. ಏಕಾಏಕಿ ಇಷ್ಟೊಂದು ದರ ಏರಿಸಿರುವುದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಸಾರ್ವಜನಿಕರು ಸ್ವಂತ ವಾಹನದಲ್ಲಿ ಓಡಾಡುವ ಪ್ರವೃತ್ತಿ ಹೆಚ್ಚು ಮಾಡುತ್ತಾರೆ. ಇದರಿಂದ ಮತ್ತಷ್ಟು ಸಂಚಾರ ದಟ್ಟಣೆ ಉಂಟಾಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಚಿಂತಿಸಿ ಆದಷ್ಟು ಬೇಗ ದರ ಕಡಿಮೆ ಮಾಡಬೇಕು.
ಬಸವರಾಜು ಎಂ.ಎನ್., ರಾಜರಾಜೇಶ್ವರಿ ನಗರ
ಬಸವರಾಜು ರಾಜರಾಜೇಶ್ವರಿ ನಗರ
‘ನಮ್ಮ ಮೆಟ್ರೊ’ ನ್ಯಾಯಯುತವಾಗಿ ಟಿಕೆಟ್ ದರ ನಿಗದಿಪಡಿಸಿದಾಗ ಅದು ಸಾರ್ವಜನಿಕ ಸೇವೆ ಎಂದೆನಿಸಿಕೊಳ್ಳುತ್ತದೆ. ಈ ರೀತಿ, ಬೇಕಾಬಿಟ್ಟಿಯಾಗಿ ಟಿಕೆಟ್ ದರ ಏರಿಸಿದರೆ ಅದು ಯಾರದ್ದೋ ಹಿತಾಸಕ್ತಿಗಾಗಿ ನೆಡೆಸುತ್ತಿರುವ ಉದ್ಯಮದಂತೆ ತೋರುತ್ತದೆ. ಬಡ ಮತ್ತು ಮಧ್ಯಮ ವರ್ಗದ ಹಿತ ಕಾಯಬೇಕಿದ್ದ ಸರ್ಕಾರಗಳು ಈ ರೀತಿ ವರ್ತಿಸುತ್ತಿರುವುದು ನಾಚಿಕೆಗೇಡು.
ಸುರೇಶ, ಹುಳಿಮಾವು
ಸುರೇಶ್ ಹುಳಿಮಾವು
ವಿವೇಚನಾರಹಿತ ‘ಪಂಚ ಗ್ಯಾರಂಟಿ’ಗಳ ಜಾರಿಯಿಂದ ಉಂಟಾಗಿರುವ ಹಣದ ಕೊರತೆಯನ್ನು ಸರಿದೂಗಿಸಲು ಸರ್ಕಾರ ಮತ್ತೆ ವಿವೇಚನಾರಹಿತ ಹಾಗೂ ಅವೈಜ್ಞಾನಿಕವಾಗಿ ಮೆಟ್ರೊ ರೈಲು ಪ್ರಯಾಣ ದರ ಏರಿಸಿದೆ. ಇದು ಸರಿಯಲ್ಲ. ಇದುವರೆಗೂ ಪ್ರಯಾಣಿಕ ಸ್ನೇಹಿ ದರಕ್ಕೆ ಒಗ್ಗಿಕೊಂಡ ಲಕ್ಷಾಂತರ ಮಂದಿ ಇನ್ನು ಈ ದರ ಏರಿಕೆಯಿಂದಾಗಿ ಸಾರ್ವಜನಿಕ ಸಾರಿಗೆಯಿಂದ ವಿಮುಖರಾಗಿ, ಸ್ವಂತ ವಾಹನಗಳನ್ನು ಅವಲಂಬಿಸುತ್ತಾರೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ, ನಗರದಲ್ಲಿ ಆರೋಗ್ಯ ಸಮಸ್ಯೆಯೂ ಕಾಡಬಹುದು.
ಬಿ.ರಮೇಶ್, ಸಪ್ತಗಿರಿ ಲೇಔಟ್, ಉತ್ತರಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.