ಬೆಂಗಳೂರು: ಮದ್ಯ ಸೇವನೆಗೆ ಹಣ ನೀಡಲು ನಿರಾಕರಿಸಿದ ತಾಯಿಯನ್ನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಸಾಯಿಸಿದ ಮಗನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುನೇಶ್ವರ ನಗರ ನಿವಾಸಿ ಶಾಂತಾಬಾಯಿ (82) ಕೊಲೆಯಾದವರು. ಗುರುವಾರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿ ಮಹೇಂದ್ರ ಸಿಂಗ್ (56)ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಚನ್ನಪಟ್ಟಣದ ಮಹೇಂದ್ರ ಸಿಂಗ್, ಬಾಗಲಗುಂಟೆಯ ಮುನೇಶ್ವರ ನಗರದ ಮನೆಯೊಂದರಲ್ಲಿ ತಾಯಿ ಜೊತೆ ಐದು ವರ್ಷಗಳಿಂದ ವಾಸವಾಗಿದ್ದ. ಮದ್ಯ ವ್ಯಸನಿಯಾಗಿದ್ದರಿಂದ ಪತ್ನಿ ಸಹ ಈತನಿಂದ ದೂರವಾಗಿದ್ದರು. ಕೆಲಸಕ್ಕೂ ಹೋಗುತ್ತಿರಲಿಲ್ಲ. ಮದ್ಯ ಸೇವನೆಗಾಗಿ ನಿತ್ಯ ತಾಯಿ ಬಳಿ ಹಣ ಪಡೆಯುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ .
‘ಶಾಂತಾಬಾಯಿ ಅವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಬರುತಿತ್ತು. ಒಂದು ಮನೆಯ ಬಾಡಿಗೆ ಹಣವೂ ಬರುತಿತ್ತು. ಈ ಆದಾಯದ ಮೂಲದಿಂದಲೇ ಶಾಂತಾಬಾಯಿ ಜೀವನ ಸಾಗಿಸುತ್ತಿದ್ದರು. ಹಣಕ್ಕಾಗಿ ತಾಯಿಗೆ ಪೀಡಿಸುತ್ತಿದ್ದ. ಇದೇ ವಿಚಾರಕ್ಕಾಗಿ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಹಣ ನೀಡದ ಕಾರಣ ಮನೆಯಲ್ಲಿದ್ದ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.