ವಿಧಾನಸೌಧ
ಬೆಂಗಳೂರು: ಬೆಂಗಳೂರು ಅರಮನೆ ಜಮೀನನ್ನು ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಂಡ ಪ್ರಮಾಣಕ್ಕೆ ಅನುಗುಣವಾಗಿ ಮಾತ್ರ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ‘ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) (ತಿದ್ದುಪಡಿ) ಮಸೂದೆ–2025ಕ್ಕೆ ವಿಧಾನಮಂಡಲದ ಉಭಯ ಸದನಗಳು ಶುಕ್ರವಾರ ಅಂಗೀಕಾರ ನೀಡಿದವು.
ಅರಮನೆಗೆ ಸೇರಿದ 15 ಎಕರೆ 17.5 ಗುಂಟೆ ಜಮೀನನ್ನು ಹಿಂದೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 1,217.41 ಚದರ ಮೀಟರ್ ಮಾತ್ರ ಬಳಕೆಯಾಗಿತ್ತು. ಆದರೆ, ಪೂರ್ಣ ವಿಸ್ತೀರ್ಣಕ್ಕೆ ಪರಿಹಾರ ನೀಡುವಂತೆ ರಾಜಮನೆತನದವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರಮನೆಗೆ ಸೇರಿದ ಜಮೀನನ್ನು ಯಾವುದೇ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳುವ ಅಥವಾ ಬಳಸಿಕೊಳ್ಳದೇ ಇರುವ ಅಧಿಕಾರವನ್ನು ತಿದ್ದುಪಡಿಯು ರಾಜ್ಯ ಸರ್ಕಾರಕ್ಕೆ ನೀಡಲಿದೆ. ಅಲ್ಲದೇ, ಈ ಹಿಂದೆ ನೀಡಲಾದ ಯಾವುದೇ ಪರಿಹಾರದ ಮೊತ್ತವನ್ನು ಬಳಸಿಕೊಳ್ಳುವ ಜಮೀನಿಗೆ ನೀಡಬೇಕಾದ ಪರಿಹಾರದ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಿದೆ.
ಬೆಂಗಳೂರು ಅರಮನೆ ಜಮೀನಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ನೀಡುವುದಕ್ಕೂ ಈ ಮಸೂದೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.