ADVERTISEMENT

ಸಾರ್ವಜನಿಕ ಶೌಚಾಲಯಗಳೇ ಅಡುಗೆ ಕೋಣೆ!

ಬಡವರ ವಾಸಕ್ಕೆ ಬಳಕೆ: ನಿರ್ವಹಣೆ ಕೊರತೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:30 IST
Last Updated 20 ನವೆಂಬರ್ 2018, 20:30 IST
ಗಾಂಧಿನಗರದ ಮಹಿಳೆಯರ ಶೌಚಾಲಯವೊಂದು ಅಡುಗೆ ಕೋಣೆಯಾಗಿದೆ (ಎಡಚಿತ್ರ) ಜಯನಗರದ ಶೌಚಾಲಯ ಟೈರ್‌ ಶೇಖರಣಾ ತಾಣವಾಗಿದೆ
ಗಾಂಧಿನಗರದ ಮಹಿಳೆಯರ ಶೌಚಾಲಯವೊಂದು ಅಡುಗೆ ಕೋಣೆಯಾಗಿದೆ (ಎಡಚಿತ್ರ) ಜಯನಗರದ ಶೌಚಾಲಯ ಟೈರ್‌ ಶೇಖರಣಾ ತಾಣವಾಗಿದೆ   

ಬೆಂಗಳೂರು: ಸಾರ್ವಜನಿಕರ ಉಪಯೋಗಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸಿರುವ ‘ಹಣ ಪಾವತಿಸಿ ಬಳಸುವ ಶೌಚಾಲಯ’ಗಳನ್ನು ಬಡವರು ವಾಸಕ್ಕೂ ಬಳಸುತ್ತಿರುವ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ.

ಶೌಚಾಲಯಗಳು ಅಡುಗೆ ಮಾಡಲು, ಮಲಗಲು ಬಳಕೆಯಾಗುತ್ತಿವೆ. ‍ಪಾತ್ರೆ ಪದಾರ್ಥಗಳನ್ನು ಪೇರಿಸಿಡುವ ತಾಣಗಳೂ ಆಗಿವೆ. ಅವುಗಳ ಶೋಚನೀಯ ಸ್ಥಿತಿ ನೋಡಿದರೆ ಸಾರ್ವಜನಿಕರು ಅವುಗಳನ್ನು ಬಳಸಲು ಸಾಧ್ಯವೇ ಇಲ್ಲ. ಬಿಬಿಎಂಪಿ ಶೌಚಾಲಯಗಳು ನಿರ್ವಹಣೆ ಮಾಡುವವರಿಗೆ ಆದಾಯ ತಂದುಕೊಡುತ್ತಿವೆ. ಆದರೆ, ಇದಕ್ಕಾಗಿ ಪ್ರತಿ ಹಂತದಲ್ಲೂ ನಾಗರಿಕರ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ.

ಒಡೆದ ಬಕೇಟ್‌ಗಳು, ಸೋರುವ ನಲ್ಲಿಗಳು, ಬಿರುಕುಬಿಟ್ಟ ಕಮೋಡ್‌ಗಳು, ಸುಟ್ಟು ಕರಕಲಾದಂತಿರುವ ಪಾತ್ರೆಗಳು, ಚಿಲಕವಿಲ್ಲದ ಬಾಗಿಲುಗಳು ಎಲ್ಲೆಡೆ ಕಂಡುಬರುತ್ತವೆ. ಇದಕ್ಕೆ ಮಹಿಳೆಯರ ಶೌಚಾಲಯ ಅಥವಾ ಪುರುಷರ ಶೌಚಾಲಯ ಎಂಬ ತಾರತಮ್ಯ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಅಡುಗೆ ಸಿದ್ಧಪಡಿಸಲು, ಮಲಗಲುಇವುಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದು ಸೋಜಿಗದ ಸಂಗತಿ.

ADVERTISEMENT

ಅತ್ಯಂತ ಕೆಟ್ಟ ವಾಸನೆ ಹೊರಸೂಸುವ ಈ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಸತತವಾಗಿ ಸ್ವಚ್ಛಗೊಳಿಸುತ್ತಿಲ್ಲ ಎಂಬ ಸಂಗತಿ ‘ಪ್ರಜಾವಾಣಿ’ ಕೆಲವು ಶೌಚಾಲಯಗಳಿಗೆ ಖುದ್ದು ಭೇಟಿ ನೀಡಿದಾಗ ಕಂಡುಬಂತು.

ಅಡುಗೆ ಕೋಣೆಯಾದ ಶೌಚಾಲಯ!

ಜನನಿಬಿಡ ಪ್ರದೇಶ ಗಾಂಧಿನಗರದಲ್ಲೂ ಸಾರ್ವಜನಿಕ ಶೌಚಾಲಯಗಳನ್ನು ಅನ್ಯ ಉದ್ದೇಶಕ್ಕೆ ಉಪಯೋಗಿಸಲಾಗುತ್ತಿದೆ. ಇಲ್ಲಿ ಮಹಿಳೆಯರಿಗಾಗಿ ನಾಲ್ಕು ಮತ್ತು ಪುರುಷರಿಗಾಗಿ ಮೂರು ಶೌಚಾಲಯಗಳಿವೆ. ಮಹಿಳೆಯರ ಎರಡು ಶೌಚಾಲಯಗಳನ್ನು ಅಡುಗೆ ತಯಾರಿಸಲು ಮತ್ತು ಪಾತ್ರೆಗಳನ್ನು ಇಡಲು ಉಪಯೋಗಿಸಲಾಗುತ್ತಿದೆ. ಉಳಿದೆರಡನ್ನು ಮಾತ್ರ ಮಹಿಳೆಯರ ಉಪಯೋಗಕ್ಕೆ ಬಿಡಲಾಗಿದೆ. ಶೌಚಕ್ಕೆ ಹೋದವರು ಇಲ್ಲಿ ₹ 5 ಪಾವತಿಸಬೇಕು. ದಿನವೊಂದಕ್ಕೆ ₹ 2ರಿಂದ ₹ 6 ಸಾವಿರದವರೆಗೆ ಆದಾಯ ಸಂಗ್ರಹವಾಗುತ್ತಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಈ ಹಿಂದೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು (ಅವರೀಗ ಉಪ ರಾಷ್ಟ್ರಪತಿ) ಅವರ ಸ್ಥಳೀಯ ಕ್ಷೇತ್ರ ಅಭಿವೃದ್ಧಿ ನಿಧಿ ಬಳಸಿಶಿವಾನಂದ ಸರ್ಕಲ್‌ ಬಳಿ ಶೌಚಾಲಯಗಳನ್ನು ಕಟ್ಟಲಾಗಿದೆ. ಇದರ ಮೇಲೆ ಬಿಜೆಪಿ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಹೆಸರೂ ಇದೆ. ಪುರುಷರ ಶೌಚಾಲಯದ ಒಂದು ಭಾಗ ಈಗ ಸಿಂಗಲ್‌ ಬೆಡ್‌ರೂಂ ಮನೆಯಾಗಿದೆ. ಅಡುಗೆ ಕೋಣೆಯಿಂದ ಶೌಚಾಲಯವನ್ನು ಕಂಬಳಿ ಹಾಕಿ ಪ್ರತ್ಯೇಕಿಸಲಾಗಿದೆ. ಮಹಿಳೆಯರ ಶೌಚಾಲಯದ ಒಳಹೊಕ್ಕರೆ ಒಡೆದ ಕಮೋಡ್‌ಗಳು ಮತ್ತು ಚಿಲಕವಿಲ್ಲದ ಬಾಗಿಲುಗಳು ಕಣ್ಣಿಗೆ ಬೀಳುತ್ತವೆ. ಒಳಚರಂಡಿ ಪೈಪ್‌ಗಳು ಒಡೆದಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ.

ಮೆಜೆಸ್ಟಿಕ್‌ನಲ್ಲಿರುವ ಪುರುಷರ ಶೌಚಾಲಯವೂ ಮನೆಯಂತೆ ಬಳಕೆಯಾಗುತ್ತಿದೆ. ಭೂಸೇನಾ ನಿಗಮ ನಿರ್ಮಿಸಿ, ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಪುರುಷರ ಶೌಚಾಲಯದ ಒಂದು ಮೂಲೆಯಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬರುತ್ತದೆ. ಗ್ಯಾಸ್‌ ಸ್ಟೌವ್‌, ಸಿಲಿಂಡರ್‌ ಮತ್ತು ಪಾತ್ರೆಗಳನ್ನು ಇಡಲಾಗಿದೆ.

ಇಂಚ್‌ಗಳು ಹಾಗೂ ನಟ್‌ ಮತ್ತು ಬೋಲ್ಟ್‌ಗಳಿಲ್ಲದ ಬಾಗಿಲುಗಳು ಬೀಳದಂತೆ ಪ್ಲಾಸ್ಟಿಕ್‌ ದಾರದಲ್ಲಿ ಬಿಗಿಯಲಾಗಿದೆ. ಇದರ ಒಂದು ಭಾಗದಲ್ಲಿ ಮೇಲ್ಚಾವಣಿಯೂ ಇಲ್ಲ. ಮಹಿಳೆಯರ ಶೌಚಾಲಯವೂ ಶೋಚನೀಯ ಸ್ಥಿತಿಯಲ್ಲಿದೆ. ನಲ್ಲಿಗಳೂ ಇಲ್ಲ. ಅತ್ಯಂತ ಕೊಳಕಾದ 20 ಲೀಟರ್‌ ನೀರಿನ ಕ್ಯಾನ್‌ಗಳನ್ನು ಬಳಕೆಗೆ ಇಡಲಾಗಿದೆ. ಇವುಗಳನ್ನು ಒಮ್ಮೆ ಬಳಸಿದವರು ಮತ್ತೊಮ್ಮೆ ಅತ್ತ ಮುಖ ಹಾಕುವುದಿಲ್ಲ.

ಕಮರ್ಷಿಯಲ್‌ ಸ್ಟ್ರೀಟ್‌ ಹಾಗೂ ಚಾಮರಾಜಪೇಟೆಯ ಶೌಚಾಲಯಗಳ ಪರಿಸ್ಥಿತಿಯೂ ಇವುಗಳಿಗಿಂತ ಭಿನ್ನವೇನೂ ಅಲ್ಲ. ಶೌಚಾಲಯಗಳಲ್ಲಿ ಸಿಲಿಂಡರ್‌, ಸ್ಟೌವ್‌ ಇಟ್ಟು ಅಡುಗೆ ಮಾಡುವುದು ಎಷ್ಟು ಸುರಕ್ಷ ಎಂಬ ಪ್ರಶ್ನೆ ಎದ್ದಿವೆ. ಇವು ಆರೋಗ್ಯ ಹಾಗೂ ನೈರ್ಮಲ್ಯದ ಸಮಸ್ಯೆಯನ್ನೂ ಹುಟ್ಟುಹಾಕಿವೆ. ಅನೇಕ ರೋಗ–ರುಜಿನುಗಳಿಗೂ ಕಾರಣವಾಗುತ್ತಿವೆ.

ಕಮಿಷನರ್‌ಗೆ ಗೊತ್ತೇ ಇಲ್ಲ

‘ಸಾರ್ವಜನಿಕ ಶೌಚಾಲಯಗಳನ್ನು ಕೆಲವರು ವಾಸಕ್ಕೆ ಅಡುಗೆಗೆ ಬಳಸುತ್ತಿರುವ ವಿಷಯ ಬಿಬಿಎಂಪಿ ಕಮಿಷನರ್‌ ಮಂಜುನಾಥ ಪ್ರಸಾದ್‌ ಅವರ ಗಮನಕ್ಕೇ ಬಂದಿಲ್ಲ.

‘ಕೆಲವು ಶೌಚಾಲಯಗಳನ್ನು ಪೌರಕಾರ್ಮಿಕರು ಮತ್ತು ಅವರ ಕುಟುಂಬದವರು, ಇನ್ನೂ ಕೆಲವನ್ನು ಖಾಸಗಿ ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿದ್ದಾರೆ. ಇವುಗಳಿಂದ ಬರುವ ಆದಾಯ ಎಲ್ಲಿ ಹೋಗುತ್ತಿದೆ ಎಂಬ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಕಮಿಷನರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶೌಚಾಲಯಗಳಲ್ಲಿ ಯಾರಾದರೂ ಅಡುಗೆ ಮಾಡುತ್ತಿದ್ದರೆ ಅದು ಕಾನೂನುಬಾಹಿರ ಕ್ರಮವಾಗುತ್ತದೆ. ತಕ್ಷಣ ಅಡುಗೆ ಪದಾರ್ಥಗಳು, ಅನಿಲ ಸಿಲಿಂಡರ್‌, ಸ್ಟೋವ್‌ಗಳನ್ನು ತೆರವುಗೊಳಿಸಲು ಆದೇಶ ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.