‘ಕಸ ತೆರವುಗೊಳಿಸಿ’
ನಗರದ ಮೇಖ್ರಿ ವೃತ್ತದ ಬಳಿ ಚಂದದ ಉದ್ಯಾನವಿದೆ. ಅದರೊಳಗೆ ಐತಿಹಾಸಿಕ ಕೆಂಪೇಗೌಡ ಗಡಿ ಗೋಪುರವಿದೆ. ನಿತ್ಯ ನೂರಾರು ವಾಯುವಿಹಾರಿಗಳು ಈ ಉದ್ಯಾನದಲ್ಲಿ ವಿಹರಿಸುತ್ತಾರೆ. ಇಂಥ ವಿಶಿಷ್ಟ ಉದ್ಯಾನ ದಿನೇದಿನೇ ಕಸದ ತೊಟ್ಟಿಯಂತಾಗುತ್ತಿದೆ. ಸ್ವಚ್ಛತೆ ಮರೀಚಿಕೆಯಾಗುತ್ತಿದೆ. ಇಲ್ಲಿಗೆ ಬರುವ ವಾಯುವಿಹಾರಿಗಳಿಗೆ ನಿತ್ಯ ಕಸದ ದರ್ಶನ ಹೆಚ್ಚಾಗುತ್ತಿದೆ. ಉದ್ಯಾನದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು.
-ಶಿವಕುಮಾರ್, ಆರ್.ಟಿ.ನಗರ
****
‘ಇಂದಿರಾ ಕ್ಯಾಂಟೀನ್ ಹೆಸರಿನ ಫಲಕ ಬರೆಯಿಸಿ’
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿಯಲ್ಲಿ ಇರುವ ಇಂದಿರಾ ಕ್ಯಾಂಟೀನ್‌ನ ಹೆಸರಿನ ಫಲಕ ಕಿತ್ತುಹೋಗಿ ವರ್ಷಗಳೇ ಕಳೆದಿವೆ. ಜನರಿಗೆ ಈ ಕ್ಯಾಂಟೀನ್‌ನ ಹೆಸರು ಏನು ಎಂಬುದು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಫಲಕದಲ್ಲಿ ಈಗ ‘ಇಂ’ ಅಕ್ಷರ ಮಾತ್ರ ಉಳಿದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಫಲಕ ಬದಲಿಸಬೇಕು.
-ಕೆ.ಎಸ್. ಕುಮಾರಸ್ವಾಮಿ, ಅಗ್ರಹಾರ ದಾಸರಹಳ್ಳಿ
****
‘ರಸ್ತೆ ದುರಸ್ತಿಗೊಳಿಸಿ’
ಮಹದೇವಪುರ ಬಿಬಿಎಂಪಿ ವಲಯದ ಬಾಬುಸಾಪಾಳ್ಯದ ದೊಡ್ಡಯ್ಯ ಬಡಾವಣೆಯಿಂದ ರಾಮಕೃಷ್ಣ ರೆಡ್ಡಿ ಬಡಾವಣೆಗೆ ಸಂಪರ್ಕಿಸುವ ರಸ್ತೆಯಲ್ಲಿ ಕಟ್ಟಡ ತ್ಯಾಜ್ಯ ತಂದು ಸುರಿಯಲಾಗುತ್ತದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ. ನಾಗ್ ಪ್ಯಾರಡೈಸ್ ಹಿಂಭಾಗದ ರಸ್ತೆಯೆಲ್ಲ ಕಿತ್ತುಹೋಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
-ಆಕಾಶ್, ಬಾಬುಸಾಪಾಳ್ಯ
****
‘ಗುಂಡಿ ಮುಚ್ಚಿ, ಸುರಕ್ಷತೆಗೆ ಆದ್ಯತೆ ನೀಡಿ’
ಸಿವಿಲ್ ಕೋರ್ಟ್ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಯ ಗಣಪತಿ ದೇವಸ್ಥಾನದ ರಸ್ತೆಯ ಮುಂಭಾಗದ ತಿರುವಿನಲ್ಲಿ ಭಾರಿ ಗುಂಡಿಯೊಂದು ಇದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಇದು ವಿಧಾನಸೌಧ, ವಿಕಾಸಸೌಧ, ಕಬ್ಬನ್ ಉದ್ಯಾನ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಂತಹ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸವಾಲಿನ ಕೆಲಸವಾಗಿದ್ದು, ಇದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಸಂಭವಿಸುತ್ತವೆ. ಕೂಡಲೇ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು.
-ಶಿವಪ್ರಸಾದ್, ವಾಹನ ಚಾಲಕ
****
‘ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ’
ಬನಶಂಕರಿ ಮೂರನೇ ಹಂತದ ಆರನೇ ಬ್ಲಾಕ್ ಎರಡನೇ ಫೇಸ್‌ನ ನಾಲ್ಕನೇ ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ (ಗಿರಿನಗರ ವಾರ್ಡ್) ತೆಂಗಿನ ಗರಿಯ ರಾಶಿ ಬಿದ್ದಿದೆ. ಎರಡು ತಿಂಗಳಿಂದ ತೆಂಗಿನ ಗರಿಯ ರಾಶಿಯನ್ನು ತೆರವುಗೊಳಿಸುವ ಕೆಲಸವಾಗಿಲ್ಲ. ಈಗ ಇದು ಕಸ ಹಾಕುವ ಸ್ಥಳವಾಗಿ ಬದಲಾಗಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಇದನ್ನು ತೆರವುಗೊಳಿಸುವಂತೆ ಬಿಬಿಎಂಪಿ ಸಿಬ್ಬಂದಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ.
-ಮೋಹನದಾಸ್, ಬನಶಂಕರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.