ಕಾವ್ಯ ಉತ್ಸವ
ಬೆಂಗಳೂರು: ಆಟ-ಗಲಾಟ ಸಂಸ್ಥೆಯು ಆಗಸ್ಟ್ 3 ಮತ್ತು 4ಕ್ಕೆ ‘ಬೆಂಗಳೂರು ಕಾವ್ಯ ಉತ್ಸವ’ದ ಎಂಟನೇ ಆವೃತ್ತಿಯನ್ನು ಹಳೆ ಮದ್ರಾಸ್ ರಸ್ತೆಯಲ್ಲಿರುವ ಗೋಪಾಲನ್ ಮಾಲ್‌ನಲ್ಲಿ ಹಮ್ಮಿಕೊಂಡಿದೆ.
‘ಉತ್ಸವದಲ್ಲಿ ಕಾವ್ಯ ಮತ್ತು ಸಂಗೀತದ ನಡುವಿನ ಸಂಪರ್ಕ ಪರಿಶೋಧನೆಗೆ ಸಹಾಯವಾಗಲಿದೆ. ಬಹುಭಾಷಾ ಕವಿಗಳು, ಗೀತ ರಚನೆಕಾರರು, ಹಾಡುಗಾರರು, ಸಂಗೀತಗಾರರು ಭಾಗವಹಿಸಲಿದ್ದಾರೆ. ಉತ್ಸವವು ಕವಿತೆ ವಾಚನ, ಸಂವಾದ, ಭಾಷಣಗಳು ಹಾಗೂ ಕಾರ್ಯಾಗಾರಗಳನ್ನು ಒಳಗೊಂಡಿದೆ. ಕಾವ್ಯವು ಗಡಿಗಳನ್ನು ಮೀರಿ ಎಲ್ಲರನ್ನೂ ಸಂಪರ್ಕಿಸುವ ಶಕ್ತಿಯನ್ನು ಹೊಂದಿದೆ’ ಎಂದು ಗ್ರ್ಯಾಂಡ್ ಮೆರ್ಕ್ಯೂರ್ ಗೋಪಾಲನ್ ಮಾಲ್‌ನ ಪ್ರಧಾನ ವ್ಯವಸ್ಥಾಪಕ ಶ್ರೀರಾಮ್ ಶೆಟ್ಟಿ ಹೇಳಿದ್ದಾರೆ.
‘ದಿ ಮ್ಯೂಸಿಕಲ್ ಮೇವರಿಕ್– ಶಂಕರ್ ಮಹಾದೇವನ್’ ಪುಸ್ತಕದ ಲೇಖಕ ಆಶಿಶ್ ಘಟಕ್ ಅವರೊಂದಿಗೆ ಸಂವಾದ ನಡೆಯಲಿದೆ. ತಮಿಳು ಸಾಹಿತ್ಯ ಮತ್ತು ಕಾವ್ಯದ ಬಗ್ಗೆ ಸಿನಿಮಾ ಕಲಾವಿದ ಎಂ. ನಾಸ್ಸೀರ್ ಅವರು ಚರ್ಚಿಸಲಿದ್ದಾರೆ. ಆನಂದ್ ಥಾಕೂರ್ ಮತ್ತು ರಂಜಿತ್ ಹೊಸಕೋಟೆ ಅವರು ತಮ್ಮ ಸಾಹಿತ್ಯ ಕೃತಿಗಳ ಬಗ್ಗೆ ಮಾತನಾಡಲಿದ್ದಾರೆ. ಹಾಸ್ಯ ಕಲಾವಿದ ವರುಣ್ ಗ್ರೋವರ್, ಸಾಹಿತಿ ಜಯಂತ್ ಕಾಯ್ಕಿಣಿ ಅವರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.
‘ಬೇಂದ್ರೆ ಪ್ರಾಜೆಕ್ಟ್‌ನವರು ದ.ರಾ. ಬೇಂದ್ರೆ ಅವರ ಕಾವ್ಯವನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಲಿದ್ದಾರೆ. ಮಧು ನಟರಾಜ ಮತ್ತು ತಂಡದವರು ಶರಣರ ವಚನಗಳನ್ನು ಆಧರಿಸಿದ ನೃತ್ಯ ಪ್ರದರ್ಶಿಸಲಿದ್ದಾರೆ. ಹಿಂದಿ ಸಿನೆಮಾದಲ್ಲಿ ಕಾವ್ಯ ಎಂಬ ವಿಷಯದ ಕುರಿತು ಸಂವಾದ ನಡೆಯಲಿದೆ’ ಎಂದು ಹೇಳಿದ್ದಾರೆ.
‘ಮಕ್ಕಳಿಗಾಗಿ ಎರಡು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಲೇಖಕರು, ಚಿತ್ರ ಕಲಾವಿದರೊಂದಿಗೆ ಸಂವಾದ, ಸಂಗೀತ, ನಾಟಕ ಇರಲಿದ್ದು, ಪ್ರತ್ಯೇಕ ಕಾರ್ಯಾಗಾರವೂ ಇರಲಿದೆ. ‘ಇಂಟು ದಿ ವೈಲ್ಡ್’ ಕಾರ್ಯಕ್ರಮದಲ್ಲಿ ಲೇಖಕಿ ವೈಷ್ಣವಿ ಗಿರಿ ಅವರು ಸುಂದರಬನ ಮತ್ತು ನೀಲಗಿರಿಗಳ ಅರಣ್ಯಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯ ಕುರಿತು ಸಂವಾದ ನಡೆಸಲಿದ್ದಾರೆ’ ಎಂದರು.
ಎರಡು ದಿನಗಳ ಈ ಉತ್ಸವದಲ್ಲಿ ಬೆಳಿಗ್ಗೆ 9.30ರಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡ, ತಮಿಳು, ಪಂಜಾಬಿ, ಗುಜರಾತಿ, ಹಿಂದಿ, ಉರ್ದು, ಬಂಗಾಳಿ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕವಿತೆಗಳ ವಾಚನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.