ADVERTISEMENT

ಬೆಂಗಳೂರು | ಮತೀಯ ಗೂಂಡಾಗಿರಿ: ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 23:30 IST
Last Updated 11 ಏಪ್ರಿಲ್ 2025, 23:30 IST
ಅಫ್ರೀದಿ ಪಾಷಾ
ಅಫ್ರೀದಿ ಪಾಷಾ   

ಬೆಂಗಳೂರು: ಇಲ್ಲಿನ ಸುವರ್ಣ ಲೇಔಟ್‌ನ ಉದ್ಯಾನದ ಬಳಿ ಮತೀಯ ಗೂಂಡಾಗಿರಿ ನಡೆಸಿದ್ದ ಆರೋಪದ ಅಡಿ ಬಾಲಕ ಸೇರಿದಂತೆ ಐವರನ್ನು ಚಂದ್ರಾಲೇಔಟ್‌ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗುಜರಿ ವ್ಯಾಪಾರಿ ಮಹೀಮ್‌, ಟೈಲರ್‌ ಮನ್ಸೂರ್‌, ವೆಲ್ಡಿಂಗ್‌ ಕೆಲಸಗಾರರಾದ ಅಫ್ರೀದಿ ಪಾಷಾ, ವಸೀಂ ಖಾನ್‌ ಹಾಗೂ ಮತ್ತೊಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು ಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಸುವರ್ಣ ಲೇಔಟ್‌ನ ಉದ್ಯಾನದ ಬಳಿ ಶನಿವಾರ ಸಂಜೆ (ಏಪ್ರಿಲ್‌ 5) ಸ್ಕೂಟರ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಆ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಬುರ್ಖಾ ಧರಿಸಿಕೊಂಡು ಹಿಂದೂ ಯುವಕನ ಜತೆಗೆ ಸ್ಕೂಟರ್‌ನಲ್ಲಿ ಏಕೆ ಕುಳಿತಿದ್ದೀಯಾ ಎಂಬುದಾಗಿ ಪ್ರಶ್ನಿಸಿದ್ದರು. ಅಲ್ಲದೇ ಪೋಷಕರ ಮೊಬೈಲ್‌ ಸಂಖ್ಯೆ ನೀಡುವಂತೆಯೂ ಯುವತಿಯನ್ನು ಕೇಳಿದ್ದರು. ನನ್ನ ಸಹಪಾಠಿ ಜತೆಗೆ ಮಾತನಾಡುತ್ತಿದ್ದೇನೆ. ಪೋಷಕರ ಮೊಬೈಲ್ ಸಂಖ್ಯೆ ಕೊಡುವುದಿಲ್ಲ ಎಂದು ಯುವತಿ ಹೇಳಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಯುವತಿಯ ಮಾತಿನಿಂದ ಸಿಟ್ಟಿಗೆದ್ದಿದ್ದ ಆರೋಪಿಗಳು ಇಬ್ಬರ ಮೇಲೂ ಹಲ್ಲೆ ನಡೆಸಿದ್ದರು. ಅಲ್ಲದೇ ಬೈಕ್‌ನಲ್ಲಿ ಕುಳಿತಿದ್ದ ಯುವಕ–ಯುವತಿ ಮಾತನಾಡುತ್ತಿರುವ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

‘ಯುವತಿ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸ್ಕೂಟರ್‌ನಲ್ಲಿ ಕುಳಿತಿದ್ದವರನ್ನು ಪ್ರಶ್ನಿಸಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಜತೆಗೆ, ಇಲ್ಲಿಗೆ ಯಾಕೆ ಬಂದಿದ್ದೀಯಾ? ಮನೆಯಲ್ಲಿ ಹೇಳಿದ್ದೀಯಾ? ಎಂದೆಲ್ಲಾ ಆರೋಪಿಗಳು ಯುವತಿಯನ್ನು ಪ್ರಶ್ನಿಸಿದ್ದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದರು.

ಮನ್ಸೂರ್‌
ಮಹೀಮ್‌
ವಸೀಂ ಖಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.