ADVERTISEMENT

ಲೈಂಗಿಕ ದೌರ್ಜನ್ಯ: DJ ಹಳ್ಳಿ ಇನ್‌ಸ್ಪೆಕ್ಟರ್‌ ಸುನಿಲ್‌, ASI ಪ್ರಕಾಶ್ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 14:17 IST
Last Updated 27 ಅಕ್ಟೋಬರ್ 2025, 14:17 IST
<div class="paragraphs"><p>ಇನ್‌ಸ್ಪೆಕ್ಟರ್‌ ಸುನಿಲ್‌</p></div>

ಇನ್‌ಸ್ಪೆಕ್ಟರ್‌ ಸುನಿಲ್‌

   

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದ ಅಡಿ ದೇವರಜೀವನಹಳ್ಳಿ (ಡಿಜೆ ಹಳ್ಳಿ) ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಸುನಿಲ್ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಪ್ರಕಾಶ್‌ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ ಕುಮಾರ್ ಸಿಂಗ್‌ ಅವರು ಸೋಮವಾರ ಆದೇಶಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 36 ವರ್ಷದ ಮಹಿಳೆಯೊಬ್ಬರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದರು. ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳನ್ನು ಅಮಾನತು ಗೊಳಿಸಿ ಆದೇಶಿಸಲಾಗಿದೆ.

ADVERTISEMENT

‘ಉಪ ನೋಂದಾಣಾಧಿಕಾರಿ ಕಚೇರಿಯಲ್ಲಿ ಮದುವೆ ಆಗುವುದಾಗಿ ಸುನಿಲ್‌ ಅವರು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಫೋಟೊ ಹಾಗೂ ವಿಡಿಯೊ ಇಟ್ಟುಕೊಂಡಿದ್ದಾರೆ. ವಿಷಯ ಬಹಿರಂಗ ಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು.

‘ಇನ್‌ಸ್ಪೆಕ್ಟರ್ ಅವರು ಮನೆ ಕೊಡಿಸುತ್ತೇನೆ. ಬ್ಯೂಟಿ ಪಾರ್ಲರ್ ನಿರ್ಮಿಸಿಕೊಡುತ್ತೇನೆ ಎಂದು ಹೇಳಿ ಎಂಟನೇ ಮೈಲಿನಲ್ಲಿರುವ ಮನೆ ಹಾಗೂ ಹೋಟೆಲ್‍ಗೆ ಕರೆದೊಯ್ದು ಕೃತ್ಯ ಎಸಗಿದ್ದರು’ ಎಂದೂ ಆರೋಪಿಸಿದ್ದರು.

‘ಪ್ರತಿ ಬಾರಿ ಫೋನ್‌ ಮಾಡಿದಾಗಲೂ ವಿಡಿಯೊ ಕಾಲ್ ಮಾಡಿ ನಗ್ನಗೊಳ್ಳುವಂತೆ ಒತ್ತಾಯಿಸಿದ್ದರು. ಈ ವಿಚಾರ ತಿಳಿದ ಅದೇ ಠಾಣೆಯ ಎಎಸ್‌ಐ ಪ್ರಕಾಶ್‌ ಅವರು ‘ಸುನಿಲ್‌ ಜತೆಗೆ ಸಹಕಾರ ನೀಡಿದ್ದೀಯಾ. ನನಗೆ ಏಕೆ ಸಹಕಾರ ನೀಡುವುದಿಲ್ಲ’ ಎಂದು ಬೆದರಿಸಿ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಸಂತ್ರಸ್ತೆ ಆರೋಪಿಸಿ ಗೋವಿಂದಪುರ ಠಾಣೆಯಲ್ಲಿ ದೂರು ನೀಡಿದ್ದರು.

ವಾಟ್ಸ್‌ಆ್ಯಪ್‌ ಸಂದೇಶಗಳನ್ನೂ ಮಹಿಳೆ ಬಹಿರಂಗ ಪಡಿಸಿದ್ದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.