ADVERTISEMENT

ಬೆಂಗಳೂರಿನ 1,478 ರೌಡಿಗಳ ಮನೆ ಮೇಲೆ ಪೊಲೀಸರಿಂದ ದಾಳಿ

ರೌಡಿಗಳ ಚಟುವಟಿಕೆ ನಿಯಂತ್ರಿಸಲು ನಗರ ಪೊಲೀಸರಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 15:54 IST
Last Updated 20 ಸೆಪ್ಟೆಂಬರ್ 2025, 15:54 IST
ರೌಡಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಿದ ಪೊಲೀಸರು 
ರೌಡಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಿದ ಪೊಲೀಸರು    

ಬೆಂಗಳೂರು: ನಗರದ 11 ಉಪ ವಿಭಾಗಗಳ ಕೆಲವು ಬಡಾವಣೆಗಳಲ್ಲಿ ನೆಲಸಿರುವ ರೌಡಿಗಳ ಮನೆಗಳ ಮೇಲೆ ಶುಕ್ರವಾರ ತಡರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು, ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ರೌಡಿ ಚುಟುವಟಿಕೆಗಳಲ್ಲಿ ಭಾಗಿ ಆಗಬಾರದು ಎಂದು ಸೂಚನೆ ನೀಡಿದ್ದಾರೆ.

1,478 ರೌಡಿಗಳ ಮನೆಗಳ ಮೇಲೆ ಆಯಾ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಪದೇ ಪದೇ ಅಪರಾಧಗಳಲ್ಲಿ ತೊಡಗುವ ಎಂಒಬಿಗಳ (ಅಪರಾಧ ಹಿನ್ನೆಲೆಯುಳ್ಳವರು) 165 ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಾರ್ಯಾಚರಣೆ ವೇಳೆ 124 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯ ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಕೆಲವು ರೌಡಿಗಳನ್ನು ಗಡಿಪಾರು ಮಾಡಲಾಗಿತ್ತು. ಆ ಪೈಕಿ ಮೂವರು ನಗರಕ್ಕೆ ವಾಪಸ್ ಬಂದು ನೆಲಸಿದ್ದು ಕಂಡುಬಂತು. ಅವರ ಮೇಲೆ ಮತ್ತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳತನ, ದರೋಡೆ ಸೇರಿ ಸಣ್ಣಪುಟ್ಟ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬ ದೂರು ಬಂದಿತ್ತು. ಅಪರಾಧ ಚಟುವಟಿಕೆಗಳಲ್ಲಿ ರೌಡಿಗಳು ಭಾಗಿ ಆಗುತ್ತಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಬಂದಿತ್ತು. ರೌಡಿಗಳ ಚಟುವಟಿಕೆ ನಿಯಂತ್ರಿಸಲು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾ ವಹಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ಸೂಚನೆಯ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ನಗರದಾದ್ಯಂತ ಹಲವು ರೌಡಿಶೀಟರ್‌ಗಳ ಮನೆಗಳ ಮೇಲೆ ನಗರ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು ಎಂದು ಗೊತ್ತಾಗಿದೆ.

ಹಲಸೂರು, ಬಾಣಸವಾಡಿ, ಇಂದಿರಾನಗರ, ಹೆಣ್ಣೂರು, ರಾಮಮೂರ್ತಿನಗರ, ಭಾರತಿನಗರ, ಶಿವಾಜಿನಗರ, ಆಡುಗೋಡಿ, ಕುಮಾರಸ್ವಾಮಿ ಲೇಔಟ್​, ತಿಲಕ್ ನಗರ ಸೇರಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಮನೆಗಳ ಮೇಲೆ ಈ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಈಶಾನ್ಯ, ಉತ್ತರ, ಪೂರ್ವ, ಪಶ್ಚಿಮ, ಎಲೆಕ್ಟ್ರಾನಿಕ್‌ ಸಿಟಿ, ಆಗ್ನೇಯ, ನೈರುತ್ಯ, ಕೇಂದ್ರ, ವಾಯವ್ಯ, ವೈಟ್‌ಫೀಲ್ಡ್‌ ಹಾಗೂ ದಕ್ಷಿಣ ಉಪ ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು.

ನಗರದ ಎಲ್ಲಾ ವಿಭಾಗಗಳ ಉಪ ವಿಭಾಗಗಳಲ್ಲಿ ಎಸಿಪಿಗಳ ನೇತೃತ್ವದಲ್ಲಿ ಮನೆಗಳು, ಬಾರ್‌ಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದ್ದು, ಶೋಧ ನಡೆಸಲಾಗಿದೆ. ರೌಡಿಶೀಟರ್‌ಗಳ ಪ್ರಸ್ತುತ ಕೆಲಸ, ಅವರ ಆದಾಯದ ಮೂಲ ಸೇರಿ ಮತ್ತಿತರ ವಿವರಗಳನ್ನು ಕಲೆ ಹಾಕಲಾಗಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿ ಆಗದಂತೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರೌಡಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು 
ರೌಡಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.