ಬೆಂಗಳೂರು: ಪಬ್‌ವೊಂದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಶ್ರೀಧರ್ ರೆಡ್ಡಿ, ಮಧು, ರಾಜೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಕಾರ್ತಿಕ್ ರೆಡ್ಡಿ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಕಾಂಗ್ರೆಸ್ ಮುಖಂಡ ಕಾರ್ತಿಕ್ ರೆಡ್ಡಿ ಹಾಗೂ ಬಿಜೆಪಿ ಮುಖಂಡ ಶ್ರೀಧರ್ ರೆಡ್ಡಿ ಅವರ ನಡುವೆ ಗಲಾಟೆ ನಡೆದಿದೆ. ಕಾರ್ತಿಕ್ ರೆಡ್ಡಿ ಅವರ ಮೇಲೆ ಶ್ರೀಧರ್ ರೆಡ್ಡಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಕಾರ್ತಿಕ್ ರೆಡ್ಡಿ ಅವರು ತನ್ನ ಸ್ನೇಹಿತ ಸೋಮ ಅಲಿಯಾಸ್ ಜಿಮ್ ಸೋಮನ ಜತೆಗೆ ನಗರದ ಪಬ್‌ವೊಂದರಲ್ಲಿ ಪಾರ್ಟಿ ಮುಗಿಸಿಕೊಂಡು ವೈಟ್‌ಫೀಲ್ಡ್‌ನತ್ತ ತೆರಳುತ್ತಿದ್ದರು. ಅಷ್ಟರಲ್ಲಿ ಕರೆ ಮಾಡಿದ್ದ ಆರೋಪಿ ರಾಜೇಶ್, ಹೂಡಿಯಲ್ಲಿರುವ ಪಬ್‌ಗೆ ಬರುವಂತೆ ಕೋರಿದ್ದ. ಇಬ್ಬರೂ ಅಲ್ಲಿಗೆ ತೆರಳಿದ್ದರು’ ಎಂದು ಪೊಲೀಸರು ಹೇಳಿದರು.
‘ಪಬ್‌ನಲ್ಲಿದ್ದಾಗ ಶ್ರೀಧರ್ ರೆಡ್ಡಿ ಅವರು ರಾಜಕಾರಣ ಹಾಗೂ ಪಕ್ಷದ ವಿಚಾರವಾಗಿ ಮಾತನಾಡಲು ಆರಂಭಿಸಿದರು. ಅದಕ್ಕೆ ಆಕ್ಷೇಪಿಸಿ, ಪಕ್ಷದ ಬಗ್ಗೆ ಮಾತನಾಡುವುದಾದರೆ ಸ್ಥಳದಿಂದ ಹೋಗುವುದಾಗಿ ತಿಳಿಸಿದ್ದೆ. ಪಬ್‌ನಿಂದ ಹೊರಗಡೆ ಬಂದಾಗ ಬೆದರಿಕೆ ಹಾಕಿದ್ದರು. ನೀನು ಕಾರ್ಪೊರೇಟ್ ಚುನಾವಣೆಗೆ ನಿಲ್ಲುತ್ತೀಯಾ. ನೀನು ನಿಂತರೆ ನಾನು ಒಂದು ನಾಯಿ ನಿಲ್ಲಿಸಿ ಚುನಾವಣೆ ಗೆಲ್ಲಿಸುತ್ತೇನೆ ಎಂದು ಶ್ರೀಧರ್ ಬೆದರಿಕೆ ಹಾಕಿದ್ದರು’ ಎಂಬುದಾಗಿ ಕಾರ್ತಿಕ್ ರೆಡ್ಡಿ ಅವರು ನೀಡಿರುವ ದೂರು ಆಧರಿಸಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಚಾಲಕನಿಗೆ ಜಾತಿ ನಿಂದನೆ ಮಾಡಲಾಗಿದೆ. ಪಿಸ್ತೂಲ್‌ನಿಂದ ಶೂಟ್ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ’ ಎಂದು ಕಾರ್ತಿಕ್ ರೆಡ್ಡಿ ಅವರು ಆಪಾದಿಸಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.