ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆಯಿಂದಾಗಿ 878 ರಸ್ತೆಗಳಲ್ಲಿ ಸುಮಾರು 343.41 ಕಿ.ಮೀ ಉದ್ದದಷ್ಟು ರಸ್ತೆ ಹಾಳಾಗಿದೆ. ಅಲ್ಲದೇ 1,114 ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ವಿಧಾನಮಂಡಲ ಅಧಿವೇಶನದಲ್ಲಿ ಬೆಂಗಳೂರಿನ ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಶಿವಕುಮಾರ್ ಈ ಮಾಹಿತಿ ನೀಡಿದ್ದಾರೆ.
ಮಳೆಯಿಂದಾಗಿ ಮರ ಬಿದ್ದು ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬದವರಿಗೆ ಬಿಬಿಎಂಪಿಯಿಂದ ಪರಿಹಾರ ವಿತರಿಸಲಾಗಿದೆ. ಇದಲ್ಲದೇ ತಗ್ಗು ಪ್ರದೇಶಗಳಲ್ಲಿ ಪ್ರವಾಹ ತಪ್ಪಿಸಲು ಚರಂಡಿಗಳಿಗೆ ತಡೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಇರುವ 218 ಜಾಗಗಳನ್ನು ಗುರುತಿಸಲಾಗಿದೆ. ಈವರೆಗೂ 169 ಕಡೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಉಳಿದ 49 ಕಡೆ
ಗಳಲ್ಲಿ ನೀರು ನುಗ್ಗುವುದನ್ನು ತಡೆ
ಯಲು ಯೋಚಿಸಲಾಗಿದೆ ಎಂದಿದ್ದಾರೆ.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ರಸ್ತೆಗಳು ಹಾನಿಗೊಂಡಿವೆ. ಸುಮಾರು 150 ಕಿ.ಮೀ. ರಸ್ತೆ ಹಾಳಾಗಿರುವ ಬಗ್ಗೆ ಬಿಬಿಎಂಪಿಗೆ ವರದಿ ಸಲ್ಲಿಸಲಾಗಿದೆ. ಆದರೆ, ಮನೆಗಳಿಗೆ ನೀರು ನುಗ್ಗಿರುವ ಪ್ರಕರಣಗಳು ದಕ್ಷಿಣ ಹಾಗೂ ಪೂರ್ವ ವಲಯದಲ್ಲಿ ಹೆಚ್ಚಾಗಿವೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆಯಿಂದ ರಸ್ತೆ ಹಾಳಾಗಿರುವ ಕುರಿತು ಹಲವರು ಆಕ್ರೋಶ ಹೊರ ಹಾಕಿದರು. ನಗರದ ಯಾವುದೇ ಭಾಗಕ್ಕೆ ಹೋದರೂ ಗುಂಡಿಯಿಲ್ಲದ ಒಂದೇ ಒಂದು ರಸ್ತೆ ಸಿಗದು. ಅಷ್ಟರ ಮಟ್ಟಿಗೆ ರಸ್ತೆಗಳು ಹಾಳಾಗಿವೆ. ಪ್ರತಿ ದಿನ ಇಂತಹ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆ ತರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮಲ್ಲೇಶ್ವರದಿಂದ ದೊಮ್ಮಲೂರಿಗೆ ನಿತ್ಯ ಸಂಚರಿಸುವ ಕೆ.ಕಾವ್ಯಾ ಆಕ್ರೋಶ ಹೊರ ಹಾಕಿದರು.
ವಲಯ;ಹಾನಿಯಾದ ರಸ್ತೆಗಳ ಸಂಖ್ಯೆ;ಉದ್ದ (ಕಿ.ಮೀ.)
ಮಹದೇವಪುರ;144;13.07
ಬೊಮ್ಮನಹಳ್ಳಿ;127;147.20
ಪೂರ್ವ;62;26.75
ಪಶ್ಚಿಮ;106;24.21
ಆರ್‌ಆರ್ ನಗರ; 113;30.24
ಯಲಹಂಕ;127;37.80
ದಕ್ಷಿಣ;135;29.79
ದಾಸರಹಳ್ಳಿ;64;34.35
ಒಟ್ಟು 878;343.41
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.