ADVERTISEMENT

ಸಾಧಾರಣ ಮಳೆಗೂ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:08 IST
Last Updated 12 ಆಗಸ್ಟ್ 2019, 20:08 IST
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಕೆಟ್ಟು ನಿಂತಿದ್ದ ಆಟೊವನ್ನು ಚಾಲಕ ತಳ್ಳಿಕೊಂಡು ಹೋದರು – ಪ್ರಜಾವಾಣಿ ಚಿತ್ರ
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಕೆಟ್ಟು ನಿಂತಿದ್ದ ಆಟೊವನ್ನು ಚಾಲಕ ತಳ್ಳಿಕೊಂಡು ಹೋದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಹಲವೆಡೆ ಸೋಮವಾರ ಸಂಜೆ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣದ ಮಧ್ಯೆಯೇ ಆಗಾಗ ಬಿಸಿಲು ಕಾಣಿಸಿಕೊಂಡಿತ್ತು.

ಭಾನುವಾರ ಸಂಜೆಯೂ ಸಾಧಾರಣ ಮಳೆಯಾಗಿತ್ತು. ಸೋಮವಾರ ಸಂಜೆ ಜಿಟಿ ಜಿಟಿ ಆರಂಭವಾದ ಮಳೆ, 10 ನಿಮಿಷಗಳವರೆಗೆ ನಿರಂತರವಾಗಿ ಸುರಿಯಿತು.

ವೈಟ್‌ಫೀಲ್ಡ್, ಮಹದೇವಪುರ, ಸರ್ಜಾಪುರ, ಬೆಳ್ಳಂದೂರು, ಎಂ.ಜಿ.ರಸ್ತೆ, ಶಿವಾಜಿನಗರ, ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಿತು. ಯಶವಂತಪುರ, ಪೀಣ್ಯ, ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಯಿತು.

ADVERTISEMENT

ಕೆಲವೆಡೆ ರಸ್ತೆ ಮೇಲೆಯೇ ನೀರು ಹರಿದು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಸವಾರರು, ದ್ವಿಚಕ್ರವಾಹನಗಳನ್ನು ಹರಿಯುತ್ತಿದ್ದ ನೀರಿನಲ್ಲೇ ನಿಧಾನವಾಗಿ ಚಲಾಯಿಸಿಕೊಂಡು ಹೋದರು. ಕೆಲ ವಾಹನಗಳು, ರಸ್ತೆ ಮಧ್ಯೆಯೇ ಕೆಟ್ಟು ನಿಂತಿದ್ದು ಕಂಡುಬಂತು.

ಪಟ್ಟಂದೂರು ಅಗ್ರಹಾರ ಕೆರೆಯಲ್ಲಿ ಬೆಂಕಿ: ವೈಟ್‌ಫೀಲ್ಡ್‌ ಸಮೀಪದ ಇಸಿಸಿ ರಸ್ತೆ ಬಳಿ ಹಾದು ಹೋಗಿರುವ ಪಟ್ಟಂದೂರು ಅಗ್ರಹಾರ ಕೆರೆಯಲ್ಲಿ ಭಾನುವಾರ ಸಂಜೆ ಬೆಂಕಿ ಕಾಣಿಸಿಕೊಂಡು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು. ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಮೋಡ ಕವಿದ ವಾತಾವರಣ: ‘ನಗರದಲ್ಲಿ ಇನ್ನು ಕೆಲದಿನ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ’ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.