ADVERTISEMENT

Bengaluru Rains: ಸಂತ್ರಸ್ತರ ಬವಣೆ ಆಲಿಸಿದ ಬಿಜೆಪಿ ನಾಯಕರು

ನಾಗರಿಕರ ಸಂಕಷ್ಟಕ್ಕೆ ಇಲ್ಲ ಸ್ಪಂದನೆ; ಹೊಸಪೇಟೆಯಲ್ಲಿ ಮೋಜು: ಬಿ.ವೈ.ವಿಜಯೇಂದ್ರ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 20:53 IST
Last Updated 20 ಮೇ 2025, 20:53 IST
ಮಳೆಯಿಂದ ತೊಂದರೆಗೀಡಾದ ಪ್ರದೇಶಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು ಮಳೆ ನೀರಿನಿಂದ ಕೊಚ್ಚಿ ಹೋದ ಮೋರಿಯ ಬಳಿ ‘ಬ್ರ್ಯಾಂಡ್‌ ಬೆಂಗಳೂರು ಅಲ್ಲ ಬ್ಯಾಡ್‌’ ಬೆಂಗಳೂರು ಎಂಬ ಪೋಸ್ಟರ್‌ ಪ್ರದರ್ಶಿಸಿದರು
ಮಳೆಯಿಂದ ತೊಂದರೆಗೀಡಾದ ಪ್ರದೇಶಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು ಮಳೆ ನೀರಿನಿಂದ ಕೊಚ್ಚಿ ಹೋದ ಮೋರಿಯ ಬಳಿ ‘ಬ್ರ್ಯಾಂಡ್‌ ಬೆಂಗಳೂರು ಅಲ್ಲ ಬ್ಯಾಡ್‌’ ಬೆಂಗಳೂರು ಎಂಬ ಪೋಸ್ಟರ್‌ ಪ್ರದರ್ಶಿಸಿದರು   

ಬೆಂಗಳೂರು: ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಜಲಾವೃತವಾಗಿರುವ ಪ್ರದೇಶಕ್ಕೆ ಬಿಜೆಪಿ ನಾಯಕರ ನಿಯೋಗವು ಮಂಗಳವಾರ ಭೇಟಿ ನೀಡಿ, ಸಂತ್ರಸ್ತರ ಬವಣೆಯನ್ನು ಆಲಿಸಿತು. ಮಳೆ ಮತ್ತು ಪ್ರವಾಹ ತಂದ ಅವಾಂತರವನ್ನು ವೀಕ್ಷಿಸಿ, ಅಂತಿಮವಾಗಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.

ಸಿಲ್ಕ್‌ಬೋರ್ಡ್‌, ಜಯನಗರದ ಬಿಸ್ಮಿಲ್ಲಾನಗರ, ಸಾಯಿಬಡಾವಣೆ, ಪದ್ಮನಾಭನಗರ, ಡಾಲರ್ಸ್‌ ಕಾಲೊನಿಯ ಮಧುವನ ಅಪಾರ್ಟ್‌ಮೆಂಟ್‌ ಮುಂತಾದ ಕಡೆಗಳಿಗೆ ಭೇಟಿ ನೀಡಿದರು. ಮಳೆಯಿಂದ ಮೃತಪಟ್ಟವರ ಮನೆಗಳಿಗೂ ಭೇಟಿ ನೀಡಿ ಸಾಂತ್ವನ ಹೇಳಿದರು.

ರಸ್ತೆಗಳು, ಮನೆಗಳು ಮತ್ತು ವಿವಿಧ ಕಟ್ಟಡಗಳಲ್ಲಿ ನೀರು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಲಾಗದೇ ಸಾರ್ವಜನಿಕರು ತೊಂದರೆಗೆ ಸಿಲುಕಿರುವುದನ್ನು ಗಮನಿಸಿ, ಅವರ ಅಹವಾಲುಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರು ‘ಬ್ರ್ಯಾಂಡ್‌ ಬೆಂಗಳೂರು ಅಲ್ಲ, ಬ್ಯಾಡ್‌ ಬೆಂಗಳೂರು’ ಎಂಬ ಪೋಸ್ಟರ್‌ ಅನ್ನು ಪ್ರದರ್ಶಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳು ಮಳೆಯಿಂದ ತತ್ತರಿಸಿದೆ. ನಾಗರಿಕರು ಕಂಗೆಟ್ಟು ಹೋಗಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದೆ ಎಂದು ಹೊಸಪೇಟೆಯಲ್ಲಿ ಮೋಜು ಮಾಡಿದೆ. ಇದು ಅಕ್ಷಮ್ಯ ಎಂದರು.

‘ಬೆಂಗಳೂರಿನಲ್ಲಿ ಜನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೆ, ಕಾಂಗ್ರೆಸ್‌ನವರು ಮೋಜಿನ ಅಮಲಿನಲ್ಲಿ ತೇಲಾಡಿದ್ದಾರೆ. ಈ ಅಯೋಗ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ’ ಎಂದು ತಿಳಿಸಿದರು.

‘ಕೆಲವೇ ಕೆಲವು ಗಂಟೆ ಮಳೆ ಬಂದಿದ್ದು, ಇಡೀ ಬೆಂಗಳೂರೇ ಜಲಾವೃತವಾಗಿದೆ. ಐವರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಗ್ರೇಟರ್‌ ಬೆಂಗಳೂರು ಬಗ್ಗೆ ಮಾತನಾಡುತ್ತಾರೆ. ಗ್ರೇಟರ್‌ ಹೆಸರು ಇಟ್ಟ ತಕ್ಷಣ ಗ್ರೇಟ್‌ ಆಗುವುದಿಲ್ಲ. ಬೆಂಗಳೂರು ಸಮಸ್ಯೆ ನೀಗಿಸಲು ಮತ್ತು ಅಭಿವೃದ್ಧಿಗ ಎಷ್ಟು ಹಣಕೊಟ್ಟಿದ್ದೀರಿ’ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ನೀಡಲಾಗಿತ್ತು. ಅನೇಕ ಕಾಮಗಾರಿಗಳು ನಡೆಯುತ್ತಿದ್ದವು. ಆ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ ಎಂದು ಹೇಳಿದರು.

‘ಮಳೆಯಿಂದ ಪ್ರವಾಹ ಸೃಷ್ಟಿ ಆದ ಮೇಲೆ ಹೂಳು ತೆಗೆಯುವಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಹೇಳಿದ್ದಾರೆ. ಮಳೆ ಬರುವುದು ಇವರಿಗೆ ಗೊತ್ತಿಲ್ಲವೇ? ಮೊದಲೇ ಏಕೆ ಕೆಲಸ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ನಿಯೋಗದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್‌, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಸತೀಶ್ ರೆಡ್ಡಿ, ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಪಕ್ಷದ ಮುಖಂಡರು ಇದ್ದರು.

‘ಸಾವಿನ ಮೇಲೆ ಕಾಂಗ್ರೆಸ್‌ ಸಾಧನೆ ಸಮಾವೇಶ’

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ₹1,600 ಕೋಟಿ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಆ ಕಾಮಗಾರಿಗಳನ್ನು ರದ್ದು ಮಾಡಿದೆ. ಆ ಕಾಮಗಾರಿಗಳು ನಡೆದಿದ್ದರೆ ಈಗ ಪ್ರವಾಹದ ಸ್ಥಿತಿ ಬರುತ್ತಿರಲಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಡೀ ಬೆಂಗಳೂರು ಮಳೆಯಿಂದ ಮುಳುಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಐದು ಮಂದಿ ಸತ್ತಿದ್ದಾರೆ. ಈ ಸಾವಿನ ಮೇಲೆ ಕಾಂಗ್ರೆಸ್‌ ಸಾಧನೆಯ ಸಮಾವೇಶ ಮಾಡಿದೆ. ಸರ್ಕಾರಕ್ಕೆ ಸೂಕ್ಷ್ಮತೆ, ಮಾನವೀಯತೆ ಇದ್ದಿದ್ದರೆ ಸಮಾವೇಶ ಮುಂದೂಡಬೇಕಿತ್ತು. ಕಾಂಗ್ರೆಸ್‌ ಸರ್ಕಾರದ ತಪ್ಪಿನಿಂದಾಗಿಯೇ ಈ ಸಾವು ಸಂಭವಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.