ADVERTISEMENT

ಬೆಂಗಳೂರು | ಭಾರಿ ಮಳೆ: ಮಹಿಳೆ ಸಾವು, ಎಂಜಿನಿಯರ್ ಕಣ್ಮರೆ - ₹5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:56 IST
Last Updated 18 ಜೂನ್ 2022, 20:56 IST
ಮಿಥುನ್
ಮಿಥುನ್   

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯ ಅನಾಹುತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ರಾಜಕಾಲುವೆಯಲ್ಲಿ ಎಂಜಿನಿಯರ್ ಒಬ್ಬರ ಕೊಚ್ಚಿ ಹೋಗಿದ್ದಾರೆ.

ಕೆ.ಆರ್. ಪುರದ ಕಾವೇರಿ ನಗರದಲ್ಲಿ ಗೋದ್ರೇಜ್ ಅಪಾರ್ಟ್‌ಮೆಂಟ್ ಸಮುಚ್ಚಯದ ಬೃಹತ್ ಗೋಡೆಯೊಂದು ಮನೆ ಮೇಲೆ ಬಿದ್ದಿದ್ದು, ಅದರ ರಭಸಕ್ಕೆ ಮನೆ ಕುಸಿದು ಅವಶೇಷಗಳಡಿ ಸಿಲುಕಿ ಮುನಿಯಮ್ಮ (62) ಅಸುನೀಗಿದ್ದಾರೆ.

‘ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುನಿಯಮ್ಮ, ಮಕ್ಕಳ ಜೊತೆ ಚಿಕ್ಕದೊಂದು ಮನೆಯಲ್ಲಿ ವಾಸವಿದ್ದರು. ಮನೆಗೆ ಹೊಂದಿಕೊಂಡು ಗೋಡೆ ಇತ್ತು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ’ ಎಂದು ನಿವಾಸಿಗಳು ಹೇಳಿದರು.

ADVERTISEMENT

ನೀರಿನಲ್ಲಿ ಕೊಚ್ಚಿಹೋದ ಎಂಜಿನಿಯರ್: ಬಸವನಪುರ ವಾರ್ಡ್‌ನ ಗಾಯಿತ್ರಿ ಲೇಔಟ್‌ನಲ್ಲಿ ರಾಜಕಾಲುವೆಯ ನೀರಿನಲ್ಲಿ ಮಿಥುನ್ (27) ಎಂಬುವರು ಕೊಚ್ಚಿಹೋಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ.

‘ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅದರಂತೆ ಗ್ರಾಮದ ಮಿಥುನ್, ನಗರದ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಜೊತೆ ವಾಸವಿದ್ದರು. ರಾಜಕಾಲುವೆ ಪಕ್ಕ ತಮ್ಮ ಬೈಕ್ ನಿಲ್ಲಿಸಿದ್ದರು. ಶುಕ್ರವಾರ ಮಳೆ ವೇಳೆ ಕಾಲುವೆ ಗೋಡೆ ಕುಸಿದು ಬೈಕ್‌ ತೇಲಿ ಹೋಗುತ್ತಿತ್ತು. ಬೈಕ್ ಹಿಡಿದು ಎಳೆದುಕೊಳ್ಳಲು ಮುಂದಾಗಿದ್ದ ಮಿಥುನ್, ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ’ ಎಂದೂ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಮಿಥುನ್ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ಮಹದೇವಪುರದ ಗಾಯತ್ರಿ ಬಡಾವಣೆಯಲ್ಲಿ ರಾಜಕಾಲುವೆ ನೀರಿನಲ್ಲಿ ಕೊಚ್ಚಿಹೋದ ಮಿಥುನ್ ಕುಟುಂಬಕ್ಕೆ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಮಿಥುನ್ ಅವರು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವುದು ನೋವಿನ ವಿಷಯ. ಮೃತ ದೇಹಕ್ಕೆ ಹುಡುಕಾಟ ನಡೆಯುತ್ತಿದ್ದು, 10 ತಂಡಗಳು ಈ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದರು.

‘ಕೆ.ಆರ್. ಪುರ ಬಳಿ ಕಾವೇರಿ ನಗರದಲ್ಲಿ ಗೋದ್ರೇಜ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಗೋಡೆ ಕುಸಿದು ಮೃತಪಟ್ಟ ಮುನಿಯಮ್ಮ ಕುಟುಂಬಕ್ಕೆ ಬಿಬಿಎಂಪಿಯಿಂದ ಪರಿಹಾರ ನೀಡುವುದಿಲ್ಲ. ಆದರೆ, ಅಪಾರ್ಟ್‌ಮೆಂಟ್ ಕಡೆಯಿಂದಲೇ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ಸಾಯಿ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರೈಲ್ವೆ ಸೇತುವೆ ಅಡಿಯಲ್ಲಿ ರಾಜಕಾಲುವೆ ಕಿರಿದಾಗಿರುವುದರಿಂದ ಆಗಾಗ ಸಮಸ್ಯೆಯಾಗುತ್ತಿದೆ. ಎಲ್ಲಾ ರಾಜಕಾಲುವೆಗಳ ಹೂಳೆತ್ತಲಾಗಿದ್ದು, ಹೂಳಿನಿಂದ ಎಲ್ಲಿಯೂ ಸಮಸ್ಯೆಯಾಗಿಲ್ಲ. ರೈಲ್ವೆ ಸೇತುವೆ ಕಾಮಗಾರಿ ತಕ್ಷಣಕ್ಕೆ ಆಗುವಂತಹದ್ದಲ್ಲ, ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.