ಬೆಂಗಳೂರು: ಬೆಂಗಳೂರಿನಲ್ಲಿ 24 ಗಂಟೆಗಳ ಅವಧಿಯಲ್ಲಿ 11.4 ಸೆಂ.ಮೀ ಗರಿಷ್ಠ ಮಳೆಮಂಗಳವಾರ(ಮೇ 17) ದಾಖಲಾಗಿದೆ. ಇದು ಕಳೆದ 10 ವರ್ಷಗಳ ಮೇ ತಿಂಗಳಿನಲ್ಲಿ ಸುರಿದಿರುವ ದಾಖಲೆ ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
1909ರ ಮೇ 6ರಂದು 15.3 ಸೆಂ.ಮೀ ಮಳೆ ಬೆಂಗಳೂರಿನಲ್ಲಿ ಸುರಿದಿತ್ತು. ಇದು ಮೇ ತಿಂಗಳಲ್ಲಿ ಒಂದು ದಿನದ ಅವಧಿಯಲ್ಲಿನ ಸಾರ್ವಕಾಲಿಕ ದಾಖಲೆ ಮಳೆ ಎಂದು ಇಲಾಖೆ ವರದಿ ಮಾಡಿದೆ. 2012ರಿಂದ ಈ ವರ್ಷದ ಮೇನಲ್ಲಿ ಮಂಗಳವಾರ ಸುರಿದ ಮಳೆಯು ದಿನದಲ್ಲೇ ಅಧಿಕ ಎನ್ನಲಾಗಿದೆ.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಹಾಗೂರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಎಂಡಿಸಿ) ಆವರಣದಲ್ಲಿ ತಲಾ 13 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಹೆಸರಘಟ್ಟ 10, ಎಚ್ಎಎಲ್ 8.6 ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) 6.6 ಸೆಂ.ಮೀ ಮಳೆ ದಾಖಲಾಗಿದೆ.
ಮೇ 1ರಿಂದ ಈವರೆಗೆ ಬೆಂಗಳೂರು ನಗರದಲ್ಲಿ ಒಟ್ಟು 40 ಸೆಂ.ಮೀ.ವರೆಗೆ ಮಳೆಯಾಗಿದೆ. ಇದೇ ಅವಧಿಯಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸುಮಾರು 37 ಸೆಂ.ಮೀ ಮಳೆ ದಾಖಲಾಗಿದೆ. ನಗರದಲ್ಲಿ ಮೇ 20ರ ನಂತರ ಮಳೆ ತಗ್ಗುವ ಸಾಧ್ಯತೆ ಇದೆ.
‘ಹಿಂದಿನ 10 ವರ್ಷಗಳ ಮೇ ತಿಂಗಳ ಗರಿಷ್ಠ ಮಳೆಯ ಪ್ರಮಾಣವನ್ನು ಗಮನಿಸಿದರೆ, ಮಂಗಳವಾರ ಸುರಿದಿರುವ ಮಳೆ ದಾಖಲೆ ಬರೆದಿದೆ. ಇದು ಇಡೀ ಬೆಂಗಳೂರಿನಲ್ಲಿ 24 ಗಂಟೆಗಳಲ್ಲಿ ದಾಖಲಾಗಿರುವ ಗರಿಷ್ಠ ಮಳೆ. ಉಳಿದಂತೆ ನಗರದ ವಿವಿಧ ಸ್ಥಳಗಳಲ್ಲಿ ಕೆಲ ಕಾಲ ಹೆಚ್ಚು ಮಳೆ ವರದಿಯಾಗಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.