ಗೋಕುಲ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಜಯರಾಮ್ ಮತ್ತು ಮೌಂಟ್ ಸೈನಾಯ್ ಆಸ್ಪತ್ರೆಯ ಅಧ್ಯಕ್ಷ ಡಾ.ಸ್ಜಾಬಿ ಡೊರೊಟೊವಿಕ್ಸ್ ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
–ಪ್ರಜಾವಾಣಿ ಚಿತ್ರ
ಬೆಂಗಳೂರು: ಚಿಕಿತ್ಸೆಯಲ್ಲಿ ಹೊಸ ವಿಧಾನಗಳನ್ನು ರೂಪಿಸಲು ಸಹಭಾಗಿತ್ವದಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ನಗರದ ರಾಮಯ್ಯ ಆಸ್ಪತ್ರೆಯ ಸಮೂಹ ಸಂಸ್ಥೆ ಮತ್ತು ನ್ಯೂಯಾರ್ಕ್‌ನ ಮೌಂಟ್ ಸೈನಾಯ್ ಆಸ್ಪತ್ರೆಗಳು ಶುಕ್ರವಾರ ಒಪ್ಪಂದ ಮಾಡಿಕೊಂಡಿವೆ.
‘ಮೌಂಟ್ ಸೈನಾಯ್ ಆಸ್ಪತ್ರೆಯು 150 ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ. ಅಮೆರಿಕದ ಅತ್ಯುನ್ನತ ಆಸ್ಪತ್ರೆಗಳ ಪಟ್ಟಿಯಲ್ಲಿ 6ನೇ ಶ್ರೇಯಾಂಕದಲ್ಲಿದೆ. ಸಂಸ್ಥೆಯು ಹೊಸ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಹೆಸರುವಾಸಿಯಾಗಿದೆ. ರಾಮಯ್ಯ ಆಸ್ಪತ್ರೆಯಲ್ಲೂ ಅಂತಹ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ ಒಪ್ಪಂದ ನೆರವಾಗಲಿದೆ. ನಮ್ಮಲ್ಲಿ ಚಿಕಿತ್ಸೆ ಪಡೆಯುವವರಿಗೆ ಅದರ ಪ್ರಯೋಜನ ಸಿಗಲಿದೆ’ ಎಂದು ಗೋಕುಲ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್. ಜಯರಾಮ್ ಹೇಳಿದರು.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಅಮೆರಿಕದಲ್ಲಿ ಒಬ್ಬ ವೈದ್ಯ ದಿನವೊಂದರಲ್ಲಿ 5–6 ರೋಗಿಗಳನ್ನು ಪರೀಕ್ಷಿಸುತ್ತಾರೆ. ಆದರೆ, ಭಾರತದಲ್ಲಿ ಒಬ್ಬ ವೈದ್ಯ ದಿನಕ್ಕೆ 50–60 ರೋಗಿಗಳನ್ನು ಪರಿಶೀಲಿಸುತ್ತಾರೆ. ಹೀಗಾಗಿಯೇ ಇಲ್ಲಿನ ವೈದ್ಯರು ಹೆಚ್ಚು ಪರಿಣತರಾಗಿರುತ್ತಾರೆ. ಆ ಪರಿಣತಿ ಮತ್ತು ಸೈನಾಯ್ ಆಸ್ಪತ್ರೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಸೇರಿದರೆ, ನಮ್ಮಲ್ಲಿ ಚಿಕಿತ್ಸೆ ಪಡೆಯುವವರಿಗೆ ಅನುಕೂಲವಾಗಲಿದೆ’ ಎಂದರು.
ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಜಗತ್ತಿನ ಅತ್ಯುತ್ತಮ ಆಸ್ಪತ್ರೆಯು ಭಾರತದ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಇಲ್ಲಿ ಹೊಸ ಅವಕಾಶಗಳನ್ನು ತೆರೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.