ADVERTISEMENT

ಬೆಂಗಳೂರು | ಸರಣಿ ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನಿಗಾಗಿ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:17 IST
Last Updated 10 ಜೂನ್ 2025, 14:17 IST
ಸಿಗ್ನಲ್‌ ಕಂಬಕ್ಕೆ ಡಿಕ್ಕಿ ಹೊಡೆದ ಸರಕು ಸಾಗಣೆ ವಾಹನ 
ಸಿಗ್ನಲ್‌ ಕಂಬಕ್ಕೆ ಡಿಕ್ಕಿ ಹೊಡೆದ ಸರಕು ಸಾಗಣೆ ವಾಹನ    

ಬೆಂಗಳೂರು: ಇಲ್ಲಿನ ಮೆಯೊ ಹಾಲ್‌ ಬಳಿ ಸೋಮವಾರ ಸಂಜೆ ಸರಣಿ ಅಪಘಾತಕ್ಕೆ ಕಾರಣವಾದ ಸರಕು ಸಾಗಣೆ ವಾಹನದ ಚಾಲಕನ ಪತ್ತೆಗೆ ಅಶೋಕ ನಗರ ಸಂಚಾರ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಾರು, ದ್ವಿಚಕ್ರ ವಾಹನ ಹಾಗೂ ಸಿಗ್ನಲ್‌ನ ಕಂಬಕ್ಕೆ ಡಿಕ್ಕಿ ಹೊಡೆಸಿ, ಸ್ಥಳದಲ್ಲೇ ಸರಕು ಸಾಗಣೆ ವಾಹನವನ್ನು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಪಿ.ಕೆ.ಹನೀಜ್‌ ಎಂಬುವವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಇನೊವಾ ಕಾರೊಂದು ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್‌ ಕಡೆಯಿಂದ ಮೆಯೊ ಹಾಲ್‌ ಜಂಕ್ಷನ್‌ ಕಡೆಗೆ ಸಾಗುತ್ತಿತ್ತು. ಜಂಕ್ಷನ್‌ನಲ್ಲಿ ರೆಡ್‌ ಸಿಗ್ನಲ್‌ ಇದ್ದ ಕಾರಣಕ್ಕೆ ಚಾಲಕ ಕಾರು ನಿಲುಗಡೆ ಮಾಡಿಕೊಂಡು ಕಾಯುತ್ತಿದ್ದರು. ಹಿಂಬದಿಯಿಂದ ಸರಕು ಸಾಗಣೆ ವಾಹನವೊಂದು ಬಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಮುಂದೆ ನಿಂತಿದ್ದ ಇನ್ನೊಂದು ದ್ವಿಚಕ್ರ ವಾಹನಕ್ಕೂ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ಆಗ ದ್ವಿಚಕ್ರ ವಾಹನ ಸವಾರ ವಿಜಯ್‌ ಕುಮಾರ್ (40) ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಅಂಜಲಿ (36) ಅವರು ಕೆಳಕ್ಕೆ ಬಿದ್ದಿದ್ದರು. ಅಂಜಲಿ ಅವರ ಮೇಲೆ ಸರಕು ಸಾಗಣೆ ವಾಹನದ ಚಕ್ರಗಳು ಹರಿದ ಪರಿಣಾಮ ಅವರು ಮೃತಪಟ್ಟರು’ ಎಂದು ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಸರಕು ಸಾಗಣೆ ವಾಹನವು ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಸಿಗ್ನಲ್‌ನ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿ ಆಗಿದ್ದಾನೆ. ವಾಹನ ಮುಂಭಾಗ ನಜ್ಜುಗುಜ್ಜಾಗಿದೆ. ಸರಕು ಸಾಗಣೆ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಸರಣಿ ಅಪಘಾತಕ್ಕೆ ಕಾರಣವಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದರು.

ವಿಜಯಕುಮಾರ್ ಅವರು ಹಾಸ್ಮಾಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಎನ್‌ಎಸ್‌ ಸೆಕ್ಷನ್‌ 281, 125(ಎ), 106(1) ಹಾಗೂ ಮೋಟಾರು ವಾಹನಗಳ ಕಾಯ್ದೆಯಡಿ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಅಪಘಾತದಿಂದ ಜಖಂಗೊಂಡಿರುವ ಕಾರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.