ADVERTISEMENT

ಬೆಂಗಳೂರು: ಮಹಿಳೆಯರ ಸ್ವಾಸ್ಥ್ಯಕ್ಕೆ 100 ಸ್ಥಳಗಳಲ್ಲಿ ‘ಶಿ’ ಶೌಚಾಲಯ

ಬೆಂಗಳೂರು ಮಹಾನಗರ ಪಾಲಿಕೆಯಿಂದ ಟೆಂಡರ್‌ ಆಹ್ವಾನ

Published 16 ಫೆಬ್ರುವರಿ 2023, 20:05 IST
Last Updated 16 ಫೆಬ್ರುವರಿ 2023, 20:05 IST
‘ಶಿ’ ಶೌಚಾಲಯ
‘ಶಿ’ ಶೌಚಾಲಯ   

ಬೆಂಗಳೂರು: ನಗರದಲ್ಲಿ 100 ಸ್ಥಳಗಳಲ್ಲಿ ಮಹಿಳೆಯರಿಗೆ ಸ್ವಾಸ್ಥ್ಯ ಸಂಬಂಧಿತ ವಿಷಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ‘ಶಿ’ (she) ಶೌಚಾಲಯವನ್ನು ಶೀಘ್ರವೇ ಆರಂಭಿಸಲಿದೆ.

ಶೌಚಾಲಯವಷ್ಟೇ ಅಲ್ಲದೆ ಮಕ್ಕಳಿಗೆ ಹಾಲುಣಿಸಲು ಅಥವಾ ಬಟ್ಟೆ ಬದಲಾಯಿಸಲು ಕೊಠಡಿಯ ವ್ಯವಸ್ಥೆಯನ್ನು ಸಹ ‘ಶಿ’ ಒಳಗೊಳ್ಳಲಿದೆ. ಮಾರ್ಚ್‌ ತಿಂಗಳ ಅಂತ್ಯದವೇಳೆಗೆ ಎಲ್ಲವೂ ಕಾರ್ಯಾರಂಭವಾಗಬೇಕು ಎಂಬ ಗುರಿ ಬಿಬಿಎಂಪಿಯದ್ದಾಗಿದೆ.

ನಗರದ ಎಂಟೂ ವಲಯಗಳಲ್ಲಿ ಬೆಂಗಳೂರು ಮಹಾನಗರಪಾಲಿಕೆಯು 100 ಸ್ಥಳಗಳನ್ನು ಗುರುತಿಸಿದ್ದು, ಕನಿಷ್ಠ 10 ಚದರ
ಅಡಿ ಪ್ರದೇಶದಲ್ಲಿ ‘ಶಿ ಶೌಚಾಲಯ’ ಆರಂಭ ಆಗಲಿದೆ. ಮೈದಾನ, ಉದ್ಯಾನ, ಹೆಚ್ಚು ಪಾದಚಾರಿಗಳಿರುವ ಪ್ರದೇಶ, ಶಾಲೆ–ಕಾಲೇಜುಗಳು, ಪ್ರಮುಖ ಸಂಸ್ಥೆಗಳು ಇರುವ ಪ್ರದೇಶ ಗಳನ್ನು ಗುರುತಿಸಲಾಗಿದೆ.

ADVERTISEMENT

‘ಶಿ ಶೌಚಾಲಯ’ ಆರಂಭಿಸಲು ಬಿಬಿಎಂಪಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿದೆ. ಫೆ.27ರವರೆಗೆ ಟೆಂಡರ್‌ ಅನ್ನು ಸಲ್ಲಿಸಬಹುದು. ವಿನ್ಯಾಸ, ಹಣಕಾಸು, ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಎಫ್‌ಬಿಒಟಿ) ಆಧಾರದಲ್ಲಿ 12 ವರ್ಷಕ್ಕೆ ಗುತ್ತಿಗೆ ನೀಡಲಾಗುತ್ತಿದೆ. ಗುತ್ತಿಗೆದಾರರಿಗೆ ಸ್ಥಳವನ್ನು ಬಿಬಿಎಂಪಿ ಒದಗಿಸಲಿದ್ದು, ಅದಕ್ಕಾಗಿ ಬಾಡಿಗೆಯನ್ನು ಪಡೆಯಲಿದೆ.

ಜಾಹೀರಾತು ಪ್ರದರ್ಶನದ ತೆರಿಗೆಯನ್ನು ಗುತ್ತಿಗೆದಾರರು ಪಾವತಿಸಬೇಕು. ಎಲ್ಲ ನಿರ್ವಹಣೆಯೂ ಗುತ್ತಿಗೆದಾರರದ್ದೇ ಆಗಿದ್ದು, ಜಾಹೀರಾತು ಮೂಲಕ ಅವರು ಹಣಗಳಿಸಬಹುದಾಗಿದೆ.

ಸೌಲಭ್ಯಗಳೇನು?: ಪ್ರತಿ ಶೌಚಾಲಯದ ಪ್ರವೇಶ ರಸ್ತೆಯತ್ತ ಇರಬಾರದು. ‘ಸ್ಮಾರ್ಟ್‌’ ಶೌಚಾಲಯದ ಸೌಲಭ್ಯದೊಂದಿಗೆ, ಹಾಲುಣಿಸುವ ಅಥವಾ ಬಟ್ಟೆಯನ್ನು ಬದಲಿಸುವ ಕೊಠಡಿ ಇರಲಿದೆ.

ಸ್ಯಾನಿಟೈಸರ್‌, ಸ್ವಯಂಚಾಲಿತ ಸೆನ್ಸರ್‌ ಯಂತ್ರ, ಕೈತೊಳೆಯುವ ಪ್ರದೇಶ, ಕನ್ನಡಿ, ಗ್ರಾನೈಟ್‌, ವೆಟ್ರಿಫೈಡ್‌ ನೆಲಹಾಸು, ಒಳಗೆ–ಹೊರಗೆ ಎಲ್‌ಇಡಿ ದೀಪ, ಶೌಚಾಲಯದ ಹೊರಗಡೆ ಸಿ.ಸಿ ಟಿ.ವಿ ‌ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ಪಾದಚಾರಿ ಮಾರ್ಗದ ಎಲ್ಲಪ್ರದೇಶಗಳನ್ನು ಈ ಶೌಚಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು ಎಂಬ ಷರತ್ತು ವಿಧಿಸಲಾಗಿದೆ. ಪಾದಚಾರಿ ಮಾರ್ಗದ ಅಗಲವನ್ನು ಆಧರಿಸಿ ಕನಿಷ್ಠ ಸ್ಥಳ ಉಪಯೋಗಿಸಬೇಕು. 1.5 ಮೀಟರ್‌ಗೆ ಕಡಿಮೆ ಇರಬಾರದು ಎಂದು ಹೇಳಲಾಗಿದೆ.

‘ಹೆಚ್ಚಿನ ಸ್ಥಳಾವಕಾಶವಿರುವ ಪ್ರದೇಶದಲ್ಲಿ ‘ಶಿ ಶೌಚಾಲಯ‘ದಲ್ಲಿ ಬಿಸಿ ಹಾಗೂ ತಣ್ಣೀರಿನ ಶವರ್‌ ಸೌಲಭ್ಯವನ್ನು ಒದಗಿಸಲಾಗುತ್ತದೆ. ಸ್ವಯಂಚಾಲಿತವಾಗಿ ನಿಲ್ಲುವ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಶೌಚಾಲಯದ ಹೊರಭಾಗದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಗಳನ್ನು ಕಲ್ಪಿಸಿ, ತೋಟಗಾರಿಕೆ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಉಚಿತ ಸೇವೆಯ ಉದ್ದೇಶ...

‘ನಗರದಲ್ಲಿ ಮಹಿಳೆಯರ ಉಪಯೋಗಕ್ಕಾಗಿ ಆರಂಭಿಸಲಾಗುತ್ತಿರುವ ‘ಶಿ’ ಶೌಚಾಲಯಗಳನ್ನು ಉಚಿತವಾಗಿ ಒದಗಿಸುವ ಉದ್ದೇಶವಿದೆ. ಹೀಗಾಗಿಯೇ ಗುತ್ತಿಗೆದಾರರಿಗೆ ಜಾಹೀರಾತು ಪ್ರದರ್ಶಿಸುವ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅದರ ಸಾಧಕ–ಬಾಧಕಗಳನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಪರುಶುರಾಮ ಮಾಹಿತಿ ನೀಡಿದರು.

ಎಲ್ಲೆಲ್ಲಿ ಎಷ್ಟು?

ವಲಯ;ಸಂಖ್ಯೆ

ಆರ್.ಆರ್. ನಗರ;17

ಮಹದೇವಪುರ;17

ಪೂರ್ವ;16

ಪಶ್ಚಿಮ;16

ದಕ್ಷಿಣ;16

ಬೊಮ್ಮನಹಳ್ಳಿ;14

ದಾಸರಹಳ್ಳಿ;2

ಯಲಹಂಕ;2

ಒಟ್ಟು;100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.