ADVERTISEMENT

‘ಸ್ಮಾರ್ಟ್ ಸಿಟಿ’ ಮತ್ತೊಂದು ವರ್ಷ ವಿಳಂಬ

2024ರ ಜೂನ್‌ 30ರವರೆಗೆ ಹೊಸ ಗಡುವು; ಪ್ರಗತಿಯಲ್ಲಿ ₹300 ಕೋಟಿ ಮೊತ್ತದ ಕಾಮಗಾರಿಗಳು

ಆರ್. ಮಂಜುನಾಥ್
Published 24 ಜೂನ್ 2023, 19:28 IST
Last Updated 24 ಜೂನ್ 2023, 19:28 IST
ಕೆ.ಆರ್. ಮಾರ್ಕೆಟ್‌ನಲ್ಲಿ ‘ಸ್ಮಾರ್ಟ್‌ ಸಿಟಿ’ ಕಾಮಗಾರಿ ನಡೆಯುತ್ತಿರುವ ಪ್ರದೇಶದ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಕೆ.ಆರ್. ಮಾರ್ಕೆಟ್‌ನಲ್ಲಿ ‘ಸ್ಮಾರ್ಟ್‌ ಸಿಟಿ’ ಕಾಮಗಾರಿ ನಡೆಯುತ್ತಿರುವ ಪ್ರದೇಶದ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ಪೂರ್ಣಗೊಳ್ಳಬೇಕಾದ ಗಡುವು ಇನ್ನೊಂದು ವರ್ಷ ವಿಳಂಬವಾಗಿದ್ದು, ಸುಮಾರು ₹300 ಕೋಟಿ ಮೊತ್ತದ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲೇ ಇವೆ.

ಸ್ಮಾರ್ಟ್‌ ಸಿಟಿ ಯೋಜನೆ ಅಧಿಕಾರಿಗಳು ಜೂನ್‌ 23ರೊಳಗೆ ಎಲ್ಲ ಕಾಮಗಾರಿಗಳು ಮುಗಿಯುತ್ತವೆ ಎಂದು ಸಮಜಾಯಿಷಿ ನೀಡುತ್ತಿದ್ದರು. ಆದರೆ, ಆ ಗಡುವು ಮುಗಿಯಲು ಒಂದೆರಡು ದಿನ ಬಾಕಿ ಇದ್ದರೂ ಏಳು ಕಾಮಗಾರಿಗಳು ನಡೆಯುತ್ತಲೇ ಇವೆ. ಇನ್ನೂ ಒಂದು ವರ್ಷ ಕಾಲಾವಕಾಶ ಸಿಕ್ಕಿರುವುದರಿಂದ ಕಾಮಗಾರಿಗಳು ಕ್ಷಿಪ್ರಗತಿ ಪಡೆದುಕೊಳ್ಳುವ ಸಾಧ್ಯತೆ ಕ್ಷೀಣಿಸಿದೆ.

ರಾಜಧಾನಿ ಬೆಂಗಳೂರನ್ನು ‘ಸ್ಮಾರ್ಟ್‌ ಸಿಟಿ ಯೋಜನೆಗೆ’ ಸಾಕಷ್ಟು ಹೋರಾಟ ಮಾಡಿ ಸೇರಿಸಲಾಗಿತ್ತು. ನಗರದಲ್ಲಿ ಐಕಾನ್‌ ಕಾಮಗಾರಿಗಳು ನಡೆಯುವ ನಿರೀಕ್ಷೆ ಇತ್ತು. ಆದರೆ, ಟೆಂಡರ್‌ಶ್ಯೂರ್‌ಗೆ ಅರ್ಧಕ್ಕಿಂತ ಹೆಚ್ಚಿನ ಹಣ ವ್ಯಯ ಮಾಡಲಾಗಿದೆ. 32 ರಸ್ತೆಗಳಲ್ಲಿ ಇನ್ನೂ 5 ರಸ್ತೆಗಳ ಕಾಮಗಾರಿ ಮುಗಿದಿಲ್ಲ.

ADVERTISEMENT

ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಅತ್ಯಾಧುನಿಕ ಸಭಾಂಗಣ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿ ಇನ್ನೂ ತೆವಳುತ್ತಲೇ ಸಾಗಿದೆ. ಮುಕ್ಕಾಲು ಭಾಗ ಕಾಮಗಾರಿ ಮುಗಿದಿದೆ ಎಂದು ಹೇಳಲಾಗುತ್ತಿದ್ದರೂ ವಾಸ್ತವದ ಚಿತ್ರ ವ್ಯತಿರಿಕ್ತವಾಗಿದೆ. ಇನ್ನು ಕೆ.ಆರ್‌. ಮಾರುಕಟ್ಟೆಯ ಆರ್ಥಿಕ ಕೇಂದ್ರದ ಮರು ಅಭಿವೃದ್ಧಿ ಕಾರ್ಯ ವರ್ಷಗಳಿಂದ ನಡೆಯುತ್ತಲೇ ಇದೆ. ಸ್ಥಳದಲ್ಲಿನ ಅವ್ಯವಸ್ಥೆ ಅಲ್ಲಿನ ಕಾಮಗಾರಿಯ ಆಮೆಗತಿಯ ಕೈಗನ್ನಡಿಯಾಗಿದೆ.

ಇನ್ನು ಅತ್ಯಂತ ನಿರೀಕ್ಷೆಯ ಸಮಗ್ರ ನಿಯಂತ್ರಣ ಕೇಂದ್ರ (ಐಸಿಸಿಸಿ) ನಗರಕ್ಕೆ ಸುರಕ್ಷತೆ ಒದಗಿಸುವ, ಸಂಚಾರ, ಪಾದಚಾರಿ, ಕುಂದುಕೊರತೆ ಸಮಸ್ಯೆಗಳಿಗೂ ಒಂದೇ ವೇದಿಕೆಯಲ್ಲಿ ಪರಿಹಾರ ಕಲ್ಪಿಸುವ ಯೋಜನೆಯಾಗಿದೆ. ಇದು ಇನ್ನೂ ಆರಂಭಿಕ ಹಂತದಲ್ಲೇ ಇದೆ. ಗಾಂಧಿಬಜಾರ್‌ನಲ್ಲಿ ಕಾರು ಪಾರ್ಕಿಂಗ್‌ ಕಾಮಗಾರಿ ಆರಂಭವೇ ಆಗಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಗಳಿಗೆ ಇನ್ನೂ ಒಂದು ವರ್ಷ ಗಡುವು ವಿಸ್ತರಣೆಯಾಗಿರುವುದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ.

ಕೆ.ಆರ್. ಮಾರ್ಕೆಟ್‌ನಲ್ಲಿ ನಡೆಯುತ್ತಿರುವ ಆರ್ಥಿಕ ಕೇಂದ್ರದ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬಹುತೇಕ ಪೂರ್ಣ...

ಸ್ಮಾರ್ಟ್‌ ಸಿಟಿ ಯೋಜನೆಗಳು ಬಹುತೇಕ ಪೂರ್ಣಗೊಂಡಿವೆ. ಸ್ಥಳೀಯ ಸಮಸ್ಯೆಗಳಿಂದಾಗಿ ಕೆಲವು ಕಾಮಗಾರಿಗಳು ವಿಳಂಬವಾಗಿವೆ. ಎಲ್ಲವನ್ನೂ ಶೀಘ್ರ ಮುಗಿಸಲಾಗುವುದು. ಹೊಸ ಯೋಜನೆಗಳನ್ನು ತೆಗೆದುಕೊಳ್ಳುವಂತಿಲ್ಲ. ಈಗಾಗಲೇ ಯೋಜಿಸಿರುವ ಕಾಮಗಾರಿಗಳನ್ನೇ ಮುಗಿಸಲಾಗುತ್ತದೆ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.