ADVERTISEMENT

ಬೆಂಗಳೂರು | ಸುಗಮ ಸಂಚಾರ: ಹಲವು ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:49 IST
Last Updated 22 ಜೂನ್ 2025, 15:49 IST
   

ಬೆಂಗಳೂರು: ನಗರದ ಹೈಗ್ರೌಂಡ್ಸ್‌, ಶೇಷಾದ್ರಿಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರ (ಒನ್‌ವೇ) ಸೇರಿದಂತೆ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.

ಸುಗಮ ವಾಹನ ಸಂಚಾರಕ್ಕೆ ಅವಕಾಶ ಹಾಗೂ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ.

ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ, ಶೇಷಾದ್ರಿಪುರಂ ರಸ್ತೆ, ಸುತ್ತಮುತ್ತಲ ಭಾಗಗಳಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಈ ಸಂಬಂಧ ಅಧ್ಯಯನ ನಡೆಸಿ ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರ, ವಾಹನ ನಿಲುಗಡೆ ನಿರ್ಬಂಧ ಹಾಗೂ ನಿಲುಗಡೆಗೆ ಅವಕಾಶ ಸೇರಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ADVERTISEMENT

ಹೈಗ್ರೌಂಡ್ಸ್‌ ವ್ಯಾಪ್ತಿ ದ್ವಿಚಕ್ರ ವಾಹನ ನಿಲುಗಡೆ: ಹೈಗ್ರೌಂಡ್ಸ್‌ ಸಮೀಪದ ರೈಲ್ವೆ ಸಮನಾಂತರ ರಸ್ತೆ (ಆರ್‌ಪಿ ರಸ್ತೆ) ಮತ್ತು ಹರೇಕೃಷ್ಣ ರಸ್ತೆ ರೈಲ್ವೆ ಕೆಳಸೇತುವೆಯಿಂದ, ಕೆ.ಪಿ ವೆಸ್ಟ್‌ 6ನೇ ಕ್ರಾಸ್‌ನ ಪೂರ್ವದಿಕ್ಕಿನವರೆಗೆ ದ್ವಿಚಕ್ರವಾಹನ ನಿಲುಗಡೆ ಮಾಡಬಹುದು.

ಕಾರು ಸೇರಿದಂತೆ ನಾಲ್ಕು ಚಕ್ರಗಳ ವಾಹನಗಳು ಆರ್.ಪಿ ರಸ್ತೆ ಮತ್ತು ಕೆ.ಪಿ ವೆಸ್ಟ್ 6ನೇ ಕ್ರಾಸ್‌ ರಸ್ತೆಯಿಂದ ಆರ್.ಪಿ ರಸ್ತೆ ಮತ್ತು ಬಿಡಿಎ ಕಚೇರಿವರೆಗೆ ಅವಕಾಶ ನೀಡಲಾಗಿದೆ.

ವಾಹನ ನಿಲುಗಡೆ ನಿರ್ಬಂಧ: ಆರ್.ಪಿ ರಸ್ತೆ ಮತ್ತು ಹರೇಕೃಷ್ಣ ರಸ್ತೆ ರೈಲ್ವೆ ಕೆಳಸೇತುವೆಯಿಂದ ಆರ್.ಪಿ ರಸ್ತೆ ಮತ್ತು ಬಿಡಿಎ ಕಚೇರಿವರೆಗಿನ ಪಶ್ಚಿಮ ದಿಕ್ಕಿನ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಗೆ ನಿರ್ಬಂಧ ವಿಸಲಾಗಿದೆ.

ಏಕಮುಖ ಸಂಚಾರ: ನೆಹರೂ ಸರ್ಕಲ್‌ನಿಂದ ಎನ್.ಎಸ್ ಅಯ್ಯಂಗಾರ್ ಸ್ಟ್ರೀಟ್ (ದಕ್ಷಿಣದಿಂದ ಉತ್ತರ ಮಾರ್ಗ). ಎನ್.ಎಸ್ ಅಯ್ಯಂಗಾರ್ ಸ್ಟ್ರೀಟ್‌ನಿಂದ ನಾಗಪ್ಪ ಸ್ಟ್ರೀಟ್ ಹಾಗೂ 3ನೇ ಕ್ರಾಸ್‌ವರೆಗೆ (ಉತ್ತರಿಂದ ದಕ್ಷಿಣ ಮಾರ್ಗ)

ಶೇಷಾದ್ರಿಪುರ ವ್ಯಾಪ್ತಿಯ ಸಂಪಿಗೆ ರಸ್ತೆಯಿಂದ ಶಿರೂರು ಪಾರ್ಕ್ ರಸ್ತೆಯ ಪಶ್ಚಿಮದಿಂದ ಪೂರ್ವ ವಿಭಾಗದ ಮಾರ್ಗವನ್ನು ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಶೇಷಾದ್ರಿಪುರ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ: ಶಿರೂರು ಪಾರ್ಕ್ ರಸ್ತೆ ಹಾಗೂ ಸೌತ್ ಎಂಡ್ ರಸ್ತೆ ಜಂಕ್ಷನ್‌ನಿಂದ ಎಸ್.ಪಿ ರಸ್ತೆ ನಟರಾಜ ಥಿಯೇಟರ್ ವರೆಗಿನ ಪಶ್ಚಿಮ ದಿಕ್ಕಿನ ರಸ್ತೆ. ಸಂಪಿಗೆ ರಸ್ತೆ ಬಿಬಿಎಂಪಿ ಕಚೇರಿಯಿಂದ ಶಿರೂರು ಪಾರ್ಕ್ ರಸ್ತೆಯ ಉತ್ತರದ ದಿಕ್ಕಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಬಹುದು.

ನಿರ್ಬಂಧ: ಶಿರೂರು ಪಾರ್ಕ್ ರಸ್ತೆ ಮತ್ತು ಸೌತ್ ಎಂಡ್ ರಸ್ತೆ ಜಂಕ್ಷನ್‌ನಿಂದ ಎಸ್.ಸಿ ರಸ್ತೆ, ಸಂಪಿಗೆ ರಸ್ತೆ ತನಕದ ಪೂರ್ವ ಹಾಗೂ ದಕ್ಷಿಣ ದಿಕ್ಕಿನ ಕಡೆಯ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.