ADVERTISEMENT

ಕಾಲ್ತುಳಿತ ಪ್ರಕರಣ: ಸಿ.ಎಂ, ಡಿ.ಸಿ.ಎಂ ವಿರುದ್ಧ ಕ್ರಮಕ್ಕೆ ಆಗ್ರಹ

ವಕೀಲರು, ಸಾಮಾಜಿಕ ಕಾರ್ಯಕರ್ತ ದೂರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಎಸ್​​ಸಿಎ ಹಾಗೂ ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ವಕೀಲ ನಟರಾಜ್ ಶರ್ಮಾ  ಎಂಬುವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರಾದ ರಾಜವರ್ಧನ್ ರೆಡ್ಡಿ, ಆರ್.ಎಲ್.ಎನ್. ಮೂರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಪ್ರತ್ಯೇಕವಾಗಿ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ.

‘ಅಜಾಗರೂಕತೆ, ನಿರ್ಲಕ್ಷ್ಯದಿಂದ ವಿಜಯೋತ್ಸವದ ವೇಳೆ ಉಂಟಾದ ದುರಂತದಿಂದ 11 ಮಂದಿ ಮೃತಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳದ ಪರಿಣಾಮ ದುರಂತ ಸಂಭವಿಸಿದೆ. ಇದಕ್ಕೆ ನೇರ ಹೊಣೆಯನ್ನು ರಾಜ್ಯ ಸರ್ಕಾರ ಹೊರಬೇಕು. ಹೀಗಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆಎಸ್​​ಸಿಎ ಹಾಗೂ ಆರ್​​ಸಿಬಿ ಫ್ರಾಂಚೈಸಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು’ ಎಂದು ದೂರಿನಲ್ಲಿ ವಕೀಲರು ತಿಳಿಸಿದ್ದಾರೆ.

ADVERTISEMENT

‘ವಿಜಯೋತ್ಸವದ ಸಂಬಂಧ ಬುಧವಾರ ಮಧ್ಯಾಹ್ನದಿಂದಲೇ ಕಾರ್ಯಕ್ರಮ ಪಟ್ಟಿ ಹರಿದಾಡುತ್ತಿತ್ತು. ಶಿವಕುಮಾರ್ ಅವರೇ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಆರ್​​ಸಿಬಿ ಆಟಗಾರರನ್ನು ಬರಮಾಡಿಕೊಂಡು ವಿಧಾನಸೌಧಕ್ಕೆ ಕರೆತಂದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾವಣೆಯಾಗುತ್ತಿದ್ದರೂ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಿರಲಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಬ್ಯಾರಿಕೇಡ್ ಹಾಕಿರಲಿಲ್ಲ. ಆಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿರಲಿಲ್ಲ’  ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.

ದುರಂತಕ್ಕೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು ಹಾಗೂ ಇತರರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಕಲಂ 106 ರ ಪ್ರಕಾರ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ  ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.