ADVERTISEMENT

ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದುಪಡಿಸಿರುವುದು ಒಪ್ಪಂದದ ಉಲ್ಲಂಘನೆ; ಕೆ–ರೈಡ್‌

ಶೇ 84ರಷ್ಟು ಜಮೀನು ಲಭ್ಯ ಇದ್ದರೂ ಕಾಮಗಾರಿ ನಡೆಸದ ಗುತ್ತಿಗೆ ಕಂಪನಿ: ಕೆ–ರೈಡ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 22:30 IST
Last Updated 3 ಆಗಸ್ಟ್ 2025, 22:30 IST
Rail_cut-out-Untitleddocument-7r45sdmqs4l1ba86obb.jpg
Rail_cut-out-Untitleddocument-7r45sdmqs4l1ba86obb.jpg   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್‌–2ಕ್ಕೆ ಸಂಬಂಧಿಸಿದಂತೆ ಶೇ 84ರಷ್ಟು ಜಮೀನು ನೀಡಲಾಗಿದೆ. ಕಾರಿಡಾರ್‌–4ಕ್ಕೆ ಸಂಬಂಧಿಸಿದಂತೆ 17 ಕಿ.ಮೀ. ಕಾಮಗಾರಿ ನಡೆಸಲು ಅವಕಾಶವಿತ್ತು. ಆದರೂ ಕಾಮಗಾರಿ ನಡೆಸದೇ ಗುತ್ತಿಗೆಯಿಂದ ಹಿಂದೆ ಸರಿದಿರುವುದು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಕೆ–ರೈಡ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್ (ಕೆ- ರೈಡ್) ಜೊತೆಗೆ ಎಲ್‌ ಆ್ಯಂಡ್‌ ಟಿ ಕಂಪನಿಯು ಎರಡು ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಂಡಿತ್ತು. 2026ರ ಅಕ್ಟೋಬರ್‌ ಒಳಗೆ ಕಾರಿಡಾರ್‌–2 (ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ) ಮತ್ತು ಕಾರಿಡಾರ್‌–4 (ಹೀಲಲಿಗೆ–ರಾಜಾನುಕುಂಟೆ) ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ.

ಈ ಒಪ್ಪಂದಗಳ ಷರತ್ತಿನ ಪ್ರಕಾರ ಎಲ್ ಆ್ಯಂಡ್‌ ಟಿಗೆ ಯಾವುದೇ ಒಪ್ಪಂದ ರದ್ದುಗೊಳಿಸುವ ಅಧಿಕಾರವಿಲ್ಲ. ಆದರೂ, ಗುತ್ತಿಗೆಗಳನ್ನು ರದ್ದುಪಡಿಸಿರುವುದಾಗಿ ಜುಲೈ 30ರಂದು ಎಲ್‌ ಆ್ಯಂಡ್‌ ಟಿ ಅಧಿಕಾರಿಗಳು ತಿಳಿಸಿದ್ದು, ಇದು ಷರತ್ತುಗಳ ಸ್ಪಷ್ಟ ಉಲ್ಲಂಘನೆ ಎಂದು ಕೆ–ರೈಡ್‌ ತಿಳಿಸಿದೆ.

ADVERTISEMENT

ಕಾರಿಡಾರ್‌–2 ಮತ್ತು 4ಕ್ಕೆ ಸಂಬಂಧಿಸಿದಂತೆ ಒದಗಿಸಲಾದ ಜಮೀನಿನಲ್ಲಿ ಕಾಮಗಾರಿ ಬಹಳ ನಿಧಾನಗತಿಯಲ್ಲಿದ್ದು, ಶೇ 20ರಷ್ಟು ಪ್ರಗತಿಯನ್ನು ಕಂಡಿಲ್ಲ. ಆದರೂ ಕಾಮಗಾರಿ ನಡೆಸಲು ಭೂಮಿ ಇಲ್ಲ ಎಂದು ಹೇಳುತ್ತಿರುವ ತರ್ಕ ಸರಿಯಲ್ಲ. ಈಗ ಒದಗಿಸಲಾಗಿರುವ ಜಮೀನಿನಲ್ಲಿ ಕೆಲಸ ಪೂರ್ಣಗೊಂಡಿದ್ದರೆ, ಉಳಿದ ಜಮೀನು ಲಭ್ಯವಾಗದೇ ತೊಂದರೆಯಾಗಿದ್ದರೆ ಒಪ್ಪಂದ ಪ್ರಕಾರ ದೂರು ನೀಡಲು, ಗಡುವು ವಿಸ್ತರಣೆ ಮಾಡಲು, ಪರಿಹಾರ ಕಂಡುಕೊಳ್ಳಲು ಅವಕಾಶವಿದ್ದರೂ ಏಕಪಕ್ಷೀಯವಾಗಿ ಮತ್ತು ಅಕ್ರಮವಾಗಿ ಗುತ್ತಿಗೆ ರದ್ದುಗೊಳಿಸಲಾಗಿದೆ.

ಎಲ್ ಆ್ಯಂಡ್‌ ಟಿಯು ಯಂತ್ರೋಪಕಣಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು, ವಿನ್ಯಾಸ ಅಂತಿಮಗೊಳಿಸುವಲ್ಲಿ ವಿಳಂಬ, ಯೋಜನಾ ನಿರ್ವಾಹಕರನ್ನು ಪದೇಪದೇ ಬದಲಾಯಿಸಿರುವುದು ಕಾಮಗಾರಿ ಕುಂಠಿತವಾಗಲು ಕಾರಣ ಎಂದು ಕೆ–ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿಡಾರ್‌–2 ಮತ್ತು 4ರಲ್ಲಿ ಉಳಿದ ಕೆಲಸಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.