ಪೂಜಾಶ್ರೀ
ಬೆಂಗಳೂರು: ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪೂಜಾಶ್ರೀ(28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಪತಿ ಕಿರುಕುಳ ನೀಡಿದ್ದರಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪತಿ ನವೀನ್ ಸೇರಿ ಅವರ ಕುಟುಂಬಸ್ಥರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಮೂರು ವರ್ಷದ ಹಿಂದೆ ಮನೆಯವರ ನಿಶ್ಚಯದಂತೆ ಪೂಜಾಶ್ರೀ ಅವರು ನಂದೀಶ್ ಅವರನ್ನು ಮದುವೆ ಆಗಿದ್ದರು. ದಂಪತಿಗೆ ಹೆಣ್ಣು ಮಗುವಿದೆ. ದಂಪತಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
‘ನಂದೀಶ್ ಅವರು ಬೇರೊಂದು ಯುವತಿಯ ಜತೆಗೆ ಸಲುಗೆಯಿಂದ ಇದ್ದರು. ಈ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು’ ಎಂದು ಮೂಲಗಳು ಹೇಳಿವೆ.
‘ನಂದೀಶ್ ಅವರು ತವರು ಮನೆಯಿಂದ ವರದಕ್ಷಿಣೆ ತರುವಂತೆ ಜಗಳ ಶುರು ಮಾಡಿದ್ದರು. ಎರಡು ಬಾರಿ ರಾಜಿ ನಡೆದಿತ್ತು. ಕಿರುಕುಳ ನೀಡುವುದಿಲ್ಲ. ಉತ್ತಮ ಜೀವನ ನಡೆಸುವುದಾಗಿ ನಂದೀಶ್ ಅವರು ಭರವಸೆ ನೀಡಿದ್ದರು’ ಎಂದು ಪೂಜಾಶ್ರೀ ಪೋಷಕರು ದೂರು ನೀಡಿದ್ದಾರೆ.
‘ಮೂರು ದಿನಗಳ ಹಿಂದೆ ಮತ್ತೆ ಜಗಳ ಮಾಡಿ ನಂದೀಶ್ ಅವರು ಪತ್ನಿಯ ಮೇಲೆ ಹಲ್ಲೆ ಮಾಡಿದ್ದರು. ಕಿರುಕುಳ ತಾಳಲಾರದೇ ಪೂಜಾಶ್ರೀ ತವರು ಮನೆಗೆ ಬಂದಿದ್ದರು. ಈ ವಿಚಾರ ತಿಳಿದು ನಂದೀಶ್ ಅತ್ತೆ ಮನೆಗೆ ಬಂದು ಪತ್ನಿಯನ್ನು ವಾಪಸ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಭಾನುವಾರ ಬೆಳಿಗ್ಗೆ ಪೂಜಾಶ್ರೀ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.