ADVERTISEMENT

ಕೃಷಿಗೂ ಕೃತಕ ಬುದ್ಧಿಮತ್ತೆ!

ದೂರಸಂವೇದಿ, ರೊಬೋಟ್‌, ಡ್ರೋನ್‌ನಿಂದ ನಿಖರ ಕೃಷಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 5:35 IST
Last Updated 20 ನವೆಂಬರ್ 2019, 5:35 IST

ಬೆಂಗಳೂರು: ಒಂದು ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬಿತ್ತಿದರೆ ಆ ಬೆಳೆಯ ಮೇಲೆ ದೂರ ಸಂವೇದಿ ಉಪಗ್ರಹದ ಮೂಲಕ ಅತ್ಯಂತ ನಿಖರವಾಗಿ ನಿಗಾ ಇಟ್ಟು, ಹೊಲದಲ್ಲಿರುವ ಕಳೆ, ತೇವಾಂಶದ ಪ್ರಮಾಣ, ಬೆಳೆಯ ಆರೋಗ್ಯ ಮತ್ತು ಭವಿಷ್ಯದಲ್ಲಿ ಫಸಲಿನ ಕರಾರುವಾಕ್‌ ಮಾಹಿತಿ ಪಡೆಯಬಹುದು.

ಅದೇ ರೀತಿ ಕೃತಕ ಬುದ್ದಿ ಮತ್ತೆ (ಆರ್ಟಿಫಿಷಿಯಲ್‌ ಇಂಟಲಿಜನ್ಸ್‌), ರೋಬಾಟಿಕ್ಸ್‌, ಡ್ರೋನ್‌ ಮತ್ತು ತಂತ್ರಜ್ಞಾನವನ್ನು ಬಳಸಿದಾಗ ಎಂತಹುದೇ ಪ್ರತಿಕೂಲ ವಾತಾವರಣದಲ್ಲೂ ಅತ್ಯಂತ ನಿಖರ ಕೃಷಿ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ‘ಇಂಟಲಿಜೆಂಟ್‌ ಸಿಸ್ಟಮ್‌ ಇನ್‌ ಅಗ್ರಿಕಲ್ಚರ್‌’ ವಿಷಯದ ಕುರಿತು ಮಾತನಾಡಿ, ಕೃಷಿ ಕ್ಷೇತ್ರದಲ್ಲಿನ ಸಂಕಷ್ಟವನ್ನು ತಗ್ಗಿಸಲು ಆಧುನಿಕ ಡಿಜಿಟಲ್‌ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟರು.

ಕೊಟ್ಟಂ ಆಗ್ರೊಫುಡ್‌ ಸ್ಥಾಪಕ ಅಧ್ಯಕ್ಷ ಡಾ.ಕೆ.ಕೆ.ನಾರಾಯಣನ್‌ ಮಾತನಾಡಿ, ದೇಶದ ಕೃಷಿ ವ್ಯವಸ್ಥೆ ಸಂಕಷ್ಟದಲ್ಲಿದೆ. ಪ್ರತಿಕೂಲ ಹವಾಮಾನ, ದುಬಾರಿ ಕೃಷಿ ವೆಚ್ಚದಿಂದಾಗಿ ರೈತ ಕೈಕಟ್ಟಿ ಕೂರುವಂತಾಗಿದೆ. ಕೃಷಿ ಭೂಮಿಯ ವ್ಯಾಪ್ತಿ ಕಡಿಮೆ ಆಗುತ್ತಿದೆ, ನೀರಿನ ಲಭ್ಯತೆಯೂ ಕುಸಿದಿದೆ. ಹವಾಮಾನ ಬದಲಾವಣೆಯಿಂದ ಫಸಲು ಕೈಗೆ ಬರುವ ಮೊದಲೇ ನಾಶವಾಗುತ್ತಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ನಿಖರ ಕೃಷಿಯತ್ತ ಗಮನ ಹರಿಸಬೇಕಾಗಿದೆ ಎಂದರು.

ADVERTISEMENT

ಸಿಟಿಒ ಸಂಸ್ಥೆಯ ಸಂಸ್ಥಾಪಕ ಡಾ. ಮಾರ್ಕ್‌ ಜೆನೆಟ್‌ ಮಾತನಾಡಿ, ಭಾರತದಲ್ಲಿ ಈಗ ಚಾಲ್ತಿಯಲ್ಲಿರುವ ಇಳುವರಿ ಅಂದಾಜು ಮಾಡುವ ವಿಧಾನ ಸರಿ ಇಲ್ಲ. ಈ ಅಂದಾಜು ಶೇ 80 ರಷ್ಟು ತಪ್ಪಾಗಿರುತ್ತದೆ. ದೂರ ಸಂವೇದಿ ತಂತ್ರಜ್ಞಾನವನ್ನು ಬಳಸಿ ಬೆಳೆಯ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿದರೆ ತಪ್ಪು ಅಂದಾಜು ಮಾಡುವುದಕ್ಕೆ ಇತಿಶ್ರೀ ಹಾಡಿ ನಿಖರ ಮಾಹಿತಿ ಪಡೆಯಬಹುದು ಎಂದು ಹೇಳಿದರು.

ಭಾರತದಲ್ಲಿ ಕೃಷಿ ಅಪಾಯಕಾರಿ ಮತ್ತು ವೈಯಕ್ತಿಕ ಮತ್ತು ವಿಶಿಷ್ಟ ನೆಲೆಯದ್ದಾಗಿದೆ. ಪ್ರತಿಯೊಬ್ಬ ರೈತನ ಸಮಸ್ಯೆ ಮತ್ತು ಬೆಳೆಯ ಸಮಸ್ಯೆಯೂ ಭಿನ್ನವಾಗಿರುತ್ತದೆ. ಇದಕ್ಕಾಗಿ ಡಿಜಿಟಲ್‌ ತಂತ್ರಜ್ಞಾನದ ಬಳಕೆ, ವಿಮೆ, ಸಾಲ ಸೌಲಭ್ಯ, ದತ್ತಾಂಶದ ಬಳಕೆ ಅತಿ ಮುಖ್ಯ. ದೂರಸಂವೇದಿ ಉಪಗ್ರಹದ ಮೂಲಕ ಪ್ರತಿಯೊಬ್ಬ ರೈತನ ಹೊಲದ ಮೇಲೂ ಕಣ್ಗಾವಲು ಇಡಬಹುದು ಎಂದು ಮಾರ್ಕ್‌ ಜೆನೆಟ್‌ ತಿಳಿಸಿದರು.

*
ಮಹಾರಾಷ್ಟ್ರದಲ್ಲಿ ಕೃತಕ ಬುದ್ದಿಮತ್ತೆ ಬಳಸಿ, ಹತ್ತಿಯ ಮೇಲಿನ ಕೀಟ ಬಾಧೆ ತಡೆಗಟ್ಟಲು ಕ್ರಮವಹಿಸಲಾಗಿದೆ. ಇದಕ್ಕಾಗಿ ಪೆಸ್ಟ್‌ ಟ್ರ್ಯಾಪ್‌ ಬಳಸಲಾಗುತ್ತಿದೆ.
-ಡಾ.ಜೆರೋಮ್‌ ವೈಟ್‌, ವಾದ್ವಾನಿ ಪ್ರತಿಷ್ಠಾನ

*
ಈ ತಂತ್ರಜ್ಞಾನಗಳು ದುಬಾರಿಯಾಗಿದ್ದು, ನಮ್ಮ ರೈತರಿಗೆ ಕೈಗೆಟುಕಲು ಸಾಧ್ಯವೇ. ಉಬರ್‌ ಪರಿಕಲ್ಪನೆಯಂತೆ ಈ ತಂತ್ರಜ್ಞಾನದ ಬಳಕೆ ಸಾಧ್ಯವೇ. ಪರಿಶೀಲಿಸಬೇಕಿದೆ
-ಡಾ.ಕೆ.ಕೆ.ನಾರಾಯಣನ್‌, ಸ್ಥಾಪಕ ಅಧ್ಯಕ್ಷ, ಕೊಟ್ಟಂ ಅಗ್ರೊಫುಡ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.