ADVERTISEMENT

ಬಸ್‌ಗಳಲ್ಲಿ ಕಳ್ಳತನ: ಆರೋಪಿಗಳು ಬಂಧನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 15:31 IST
Last Updated 21 ಆಗಸ್ಟ್ 2023, 15:31 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ ಬಸ್‌ಗಳಲ್ಲಿ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ಮದನಪಲ್ಲಿಯ ಶಬರೀಶ್ (32) ಹಾಗೂ ಬೆಂಗಳೂರು ಜಯನಗರದ ಫಜಲ್ ಪಾಷಾ (29) ಬಂಧಿತರು. ಇವರಿಬ್ಬರು ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದರು. ಇವರಿಂದ 39 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಹೋಗುವ ಬಸ್‌ಗಳಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಪ್ರಯಾಣಿಕರು ನಿದ್ದೆಗೆ ಜಾರುತ್ತಿದ್ದಂತೆ, ಅವರ ಬ್ಯಾಗ್‌ಗಳಲ್ಲಿ ಹುಡುಕಾಟ ನಡೆಸುತ್ತಿದ್ದರು. ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಕದಿಯುತ್ತಿದ್ದರು. ಮೂತ್ರ ವಿಸರ್ಜನೆಗಾಗಿ ಚಾಲಕರು ಬಸ್‌ ನಿಲ್ಲಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿದ್ದರು’ ಎಂದು ತಿಳಿಸಿದರು.

ADVERTISEMENT

‘ಇತ್ತೀಚೆಗೆ ಆರೋಪಿಗಳ ಕೃತ್ಯದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತನಿಖೆ ಕೈಗೊಂಡಾಗ ಕೆಲ ಸುಳಿವುಗಳು ಸಿಕ್ಕಿದ್ದವು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇವರಿಬ್ಬರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.