ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ವಾಹನ ಸಂಚಾರ ದುಸ್ತರವಾಗಿದೆ. ವಿಮಾನ ನಿಲ್ದಾಣ ರಸ್ತೆಯ ಸಂಚಾರ ದಟ್ಟಣೆಯ ಕಹಿ ಅನುಭವವನ್ನು ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೊವನ್ನು 1.90 ಕೋಟಿ ಮಂದಿ ವೀಕ್ಷಿಸಿದ್ದಾರೆ.
‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್) ಹೊರಟ ವಿಮಾನ ದುಬೈ ತಲುಪಿದರೂ ನಾನು ವಿಮಾನ ನಿಲ್ದಾಣದಿಂದ ಮನೆ ಸೇರಲು ಆಗಿಲ್ಲ. ವಾಹನ ದಟ್ಟಣೆಯಲ್ಲಿ ಸಿಲುಕಿದ್ದೇನೆ. ಇದು ಸುಖಕರ ಪ್ರಯಾಣವಲ್ಲ, ಆಘಾತ’ ಎಂದು ಯುವತಿಯು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.
ಇದನ್ನು ನೋಡಿದ ಹಲವರು, ಸರ್ಕಾರ ಹಾಗೂ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ. ಇನ್ನೂ ಹಲವರು ಬೆಂಗಳೂರಿನ ಟ್ರಾಫಿಕ್ ಬಗ್ಗೆ ವ್ಯಂಗ್ಯವಾಡಿ, ಮೀಮ್ಸ್ ಮತ್ತು ಜೋಕ್‍ಗಳನ್ನು ಮಾಡಿದ್ದಾರೆ.
ಇನ್‍ಸ್ಟಾಗ್ರಾಮ್‍ನ ಟ್ರಾವೆಲ್ ಫುಡ್ಡಿ ಗಲ್ಸ್ ಎಂಬ ಟ್ಯಾಗ್‌ನಡಿ ಯುವತಿಯರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ವಿಡಿಯೊ ಹಂಚಿಕೊಂಡಿದ್ದಾರೆ. ‘ನನ್ನ ಸ್ನೇಹಿತೆ ದುಬೈಗೆ ಹೊರಟಿದ್ದು, ಆಕೆಯನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಿಟ್ಟು ಬಂದೆ. ಅವಳು ದುಬೈ ತಲುಪಿದಳು. ಆದರೆ, ನಾನು ಇನ್ನೂ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದೇನೆ. ಇದು ನಿಜವಾದ ಘಟನೆಯನ್ನು ಆಧರಿಸಿದೆ. ಬೆಂಗಳೂರಿನ ಜನರಿಗೆ ಟ್ಯಾಗ್ ಮಾಡಿ’ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
`ಬೆಂಗಳೂರಿನ ಟ್ರಾಫಿಕ್ ಹೇಗಿದೆ ಎಂದರೆ ವಿಮಾನದಲ್ಲಿ ದುಬೈಗೆ ಹೋಗಿ ಬರೋದಕ್ಕೆ ಎಷ್ಟು ಸಮಯ ಬೇಕಾಗುತ್ತೋ ಅಷ್ಟೇ ಸಮಯ ಇಲ್ಲಿ ಟ್ರಾಫಿಕ್ ಜಂಜಾಟದಲ್ಲಿ ಕಳೆದು ಹೋಗುತ್ತೆ. ಇನ್‍ಸ್ಟಾಗ್ರಾಮ್‍ನಲ್ಲಿ ಒಬ್ಬರು ಹಾಕಿರುವ ಪೋಸ್ಟ್‌ನಿಂದ ಇದು ಗೊತ್ತಾಗಿದೆ. ಅವರ ಸ್ನೇಹಿತೆ ದುಬೈಗೆ ಹೋಗಿ ತಲುಪಿದರು. ಆದರೆ, ಅವರು ಮಾತ್ರ ಬೆಂಗಳೂರಿನ ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿದ್ದರು’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಯುವತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗ, `ಈ ಸಮಯದಲ್ಲಿ ನಾನು ನಡೆದು ಹೋಗಲು ಇಷ್ಟ ಪಡುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, `ಇದು ನಿಜವಾಗಿಯೂ ನನ್ನ ಅನುಭವಕ್ಕೆ ಬಂದಿದೆ. ಪೋಷಕರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋದರು. ನಾನು ದಿಲ್ಲಿಗೆ ಬಂದಿಳಿದಾಗ ಅವರು ಮನೆ ತಲುಪಿದರು’ ಎಂದು ತಿಳಿಸಿದ್ದಾರೆ.
‘ಬೆಂಗಳೂರಿನ ಟ್ರಾಫಿಕ್ ತುಂಬಾ ಕೆಟ್ಟದಾಗಿದೆ. ವಿದೇಶಕ್ಕೆ ಹೋಗಿ ಬರುವುದಕ್ಕಿಂತ ಇಲ್ಲಿನ ಟ್ರಾಫಿಕ್‍ನಲ್ಲಿ ಹೆಚ್ಚು ಸಮಯ ಕಳೆದು ಹೋಗುತ್ತದೆ’ ಎಂದು ಹಲವರು ಪೋಸ್ಟ್‌ನಲ್ಲಿ ತಮಾಷೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.