ದಾಬಸ್‌ಪೇಟೆ: ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ –48ರ ದಾಬಸ್‌ಪೇಟೆಯ ಲಕ್ಕೂರು ಸೇತುವೆ ಬಳಿ ಗುರುವಾರ ಕಾರೊಂದು ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಎಂಟನೇ ಕ್ರಾಸ್‌ನ ತೆಂಗಿನಮರದ ರಸ್ತೆಯ ನಿವಾಸಿಗಳಾದ ಗೋಪಾಲ್ (60), ಅವರ ಪತ್ನಿ ಶಶಿಕಲಾ (55) ಹಾಗೂ ಪುತ್ರಿ ದೀಪಾ (30) ಮೃತಪಟ್ಟವರು. ಮಕ್ಕಳಾದ ಭುವನ್(5) ಹಾಗೂ ಆದ್ಯ ಅವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಶಿಕಲಾ ಹಾಗೂ ದೀಪಾ ಸ್ಥಳದಲ್ಲೇ ಮೃತಪಟ್ಟರೆ, ಗೋಪಾಲ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತುಮಕೂರು ಸಮೀಪದ ಗ್ರಾಮವೊಂದರ ಸಂಬಂಧಿಕರ ಮನೆಯಲ್ಲಿಆಯೋಜಿಸಿದ್ದ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾರುತಿ ಸೆಲೆರಿಯೊ ಕಾರಿನಲ್ಲಿ ತೆರಳುತ್ತಿದ್ದರು. ಲಕ್ಕೂರು ಸೇತುವೆ ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
‘ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಹಾಕಿದ್ದರೆ? ಎಂಬುದನ್ನು ಪರಿಶೀಲಿಸಲಾಗುತ್ತಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಬೆಂಗಳೂರು ಕಡೆಯಿಂದ ತುಮಕೂರು ಕಡೆ ಕಾರು ಚಲಿಸುತ್ತಿತ್ತು. ಅದೇ ಮಾರ್ಗವಾಗಿ ಹೋಗುತ್ತಿದ್ದ ಲಾರಿ ಚಾಲಕ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಿದ್ದ. ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ರಸ್ತೆಯ ವಿಭಜಕ್ಕೆ ಡಿಕ್ಕಿಯಾಗಿದೆ ಎಂಬುದು ಗೊತ್ತಾಗಿದೆ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿ.ಕೆ.ಬಾಬಾ ಹಾಗೂ ನೆಲಮಂಗಲ ಸಂಚಾರ ಠಾಣೆಯ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಕಣ್ಣೀರು ಹಾಕಿದರು. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಸಂಚಾರ ದಟ್ಟಣೆ: ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ನೆಲಮಂಗಲ ಸಂಚಾರ ಠಾಣೆಯ ಪೊಲೀಸರು, ಅಪಘಾತಕ್ಕೀಡಾದ ಕಾರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.