ಬಂಧನ
ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗಿ ಆರೋಪಿಗಳ ಪರವಾಗಿ ನಕಲಿ ದಾಖಲೆ ಸಲ್ಲಿಸುತ್ತಿದ್ದ ಇಬ್ಬರನ್ನು ಹಲಸೂರು ಗೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್‌ನ ಗುರುಪ್ಪನಪಾಳ್ಯದ ಎಂಟನೇ ಹಂತದ ನಿವಾಸಿ ಅಬೀದ್ ವಾಸೀಂ ಹಾಗೂ ಯಶವಂತಪುರ ಪೈಪ್‌ಲೈನ್ ರಸ್ತೆ ಡಿ ಕ್ರಾಸ್ ನಿವಾಸಿ ಆಹ್ಮದ್ ಜುಬೇರ್ ಬಂಧಿತರು.
ಆರೋಪಿಗಳಿಂದ ನಕಲಿ ಆಧಾರ್ ಕಾರ್ಡ್, ಆರ್‌ಟಿಸಿ, ಮುಟೇಷನ್ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ನಕಲಿ ವೇತನ ಚೀಟಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಠಾಣೆ ವ್ಯಾಪ್ತಿಯ ಬನ್ನಪ್ಪ ಉದ್ಯಾನದ ಬಳಿ ಇಬ್ಬರು ನಕಲಿ ದಾಖಲೆಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ಸಂಗತಿ ಗೊತ್ತಾಯಿತು ಎಂದು ಪೊಲೀಸರು ಹೇಳಿದರು.
‘ನಕಲಿ ಆಧಾರ್ ಕಾರ್ಡ್, ಆರ್‌ಟಿಸಿ, ಮುಟೇಷನ್ ಹಾಗೂ ವಿವಿಧ ಸರ್ಕಾರಿ ಇಲಾಖೆಯ ನಕಲಿ ವೇತನ ಚೀಟಿಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದ ಆರೋಪಿಗಳು, ನ್ಯಾಯಾಲಯದಲ್ಲಿ ಜಾಮೀನು ಕೋರಿರುವ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದರು. ಜಾಮೀನು ಕೋರಿರುವ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ನಕಲಿ ದಾಖಲೆಗಳನ್ನು ಸಲ್ಲಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಇಬ್ಬರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.