ಬೆಂಗಳೂರು: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ವಿಶೇಷ ಕಾರ್ಯಾಚರಣೆ ನಡೆಸಿ, ನಗರದ ಕೆಂಗೇರಿ ಮತ್ತು ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ, ಅವರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ.
ರಾಮಮೂರ್ತಿ ನಗರ, ಬಾಣಸವಾಡಿ, ಪರಪ್ಪನ ಅಗ್ರಹಾರ, ಸೋಲದೇವನಹಳ್ಳಿ, ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದ 10 ವಿದೇಶಿ ಪ್ರಜೆಗಳ ಬಳಿ ಸಮರ್ಪಕ ದಾಖಲೆಗಳು ಇಲ್ಲದ ಕಾರಣ ಅವರನ್ನು ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಒ) ಮುಂದೆ ಹಾಜರುಪಡಿಸಲಾಯಿತು. ಬಳಿಕ ಅವರನ್ನು ಅಕಮ ವಲಸಿಗರ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆ ನೀಡುವ ಮುನ್ನ ಸಮರ್ಪಕ ದಾಖಲೆಗಳನ್ನು ಪಡೆದುಕೊಳ್ಳದ ಮನೆ ಮಾಲೀಕರ ವಿರುದ್ಧ ವಿದೇಶಿ ಕಾಯ್ದೆ ಮತ್ತು ಬಿಎಎನ್‌ಎಸ್ ಪ್ರಕಾರ ರಾಮಮೂರ್ತಿ ನಗರ, ಬಾಣಸವಾಡಿ, ಪರಪ್ಪನ ಅಗ್ರಹಾರ, ಸೋಲದೇವನಹಳ್ಳಿ, ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನಿಯಮದ ಪ್ರಕಾರ ವಿದೇಶಿ ಪ್ರಜೆಗೆ ಮನೆಯನ್ನು ಬಾಡಿಗೆಗೆ ನೀಡಿದ ಮಾಲೀಕರು 24 ತಾಸಿನೊಳಗೆ ವಿದೇಶಿಯರ ನೋಂದಣಿ ಇಲಾಖೆಯ ಆನ್‌ಲೈನ್ ಪೋರ್ಟಲ್ (http://indianfrro.gov.in/frro/FormC/dummy1.jsp) ಮೂಲಕ ನಮೂನೆ–ಸಿ ಅನ್ನು ಎಫ್‌ಆರ್‌ಆರ್ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಧಿಕಾರಿಗಳು ನಮೂನೆ–ಸಿ ಅನ್ನು ಅನುಮೋದಿಸಿದ ಬಳಿಕವೇ ವಿದೇಶಿ ವ್ಯಕ್ತಿಗೆ ವಾಸ್ತವ್ಯಕ್ಕೆ ಅವಕಾಶ ನೀಡಬೇಕು. ಅನುಮೋದಿಸಿದ ನಂತರದ 24 ಗಂಟೆಯೊಳಗೆ ಮನೆಯ ಮಾಲೀಕ ಅಥವಾ ನಿರ್ವಹಣೆ ಮಾಡುವ ವ್ಯಕ್ತಿ, ವಿದೇಶಿ ವ್ಯಕ್ತಿ ನಮೂನೆ–ಸಿ ಮುದ್ರಿತ ಪ್ರತಿಗಳನ್ನು ಹೊಂದಿರಬೇಕು ಎಂಬ ನಿಯಮವಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಹತ್ತು ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡಿದ ಮನೆಯ ಮಾಲೀಕರು ಎಫ್‌ಆರ್‌ಆರ್ ಅಧಿಕಾರಿಗಳು ಅನುಮೋದಿಸಿದ ನಮೂನೆ–ಸಿ ಅನ್ನು ಪಡೆದುಕೊಂಡಿಲ್ಲ. ಹಾಗಾಗಿ ಅವರ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.