ADVERTISEMENT

ಬೆಂಗಳೂರು ವಿ.ವಿ: ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 16:03 IST
Last Updated 3 ಫೆಬ್ರುವರಿ 2025, 16:03 IST
ಪಾವನಾ 
ಪಾವನಾ    

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿನಿ ಎಚ್‌.ಎನ್‌.ಪಾವನಾ (21) ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರು ಜಿಲ್ಲೆ, ಎಚ್‌.ಡಿ.ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಪಾವನಾ ಅವರು, ಎರಡನೇ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿದ್ದರು. ಜ್ಞಾನಭಾರತಿ ಆವರಣದ ರಮಾಬಾಯಿ ಮಹಿಳಾ ವಿದ್ಯಾರ್ಥಿ ನಿಲಯದ ಕೊಠಡಿ ಸಂಖ್ಯೆ 124ರಲ್ಲಿ ನೆಲಸಿದ್ದರು.

‘ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಕೊಠಡಿಯಲ್ಲಿ ಅಳವಡಿಸಿರುವ ಫ್ಯಾನ್‌ಗೆ ದುಪ್ಪಟ್ಟಾದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ನೇಹಿತೆಯರು ತರಗತಿ ಮುಗಿಸಿಕೊಂಡು ವಾಪಸ್‌ ಬಂದು ನೋಡಿದಾಗ ಪಾವನಾ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿತ್ತು. ತಕ್ಷಣವೇ ಅವರು ಹಾಸ್ಟೆಲ್‌ ವಾರ್ಡನ್‌ಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣಿತರು ಬಂದು ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ದೂರು ಪಡೆದು ತನಿಖೆ ನಡೆಸಲಾಗುವುದು. ಮೊಬೈಲ್‌ ವಶಕ್ಕೆ ಪಡೆದು ಕರೆಗಳ ವಿವರ ಪರಿಶೀಲನೆ ನಡೆಸಲಾಗುವುದು. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಪೋಷಕರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು‘ ಎಂದು ಪೊಲೀಸರು ಹೇಳಿದರು.

ಕೈ ಕೊಯ್ದುಕೊಂಡಿದ್ದ ವಿದ್ಯಾರ್ಥಿನಿ: ‘ಪಾವನಾ ಅವರು ಯುವಕನನ್ನು ಪ್ರೀತಿಸುತ್ತಿದ್ದರು. ಇತ್ತೀಚೆಗೆ ಪಾವನಾ ಅವರನ್ನು ಆ ಯುವಕ ಕಡೆಗಣಿಸಿದ್ದ ಎನ್ನಲಾಗಿದೆ. ಯುವಕನ ಜನ್ಮ ದಿನಾಚರಣೆ ಮಂಗಳವಾರ ಇತ್ತು. ಜನ್ಮ ದಿನಾಚರಣೆಯನ್ನು ಒಟ್ಟಿಗೆ ಆಚರಣೆ ಮಾಡೋಣ ಎಂದು ಯುವತಿ ಮನವಿ ಮಾಡಿದ್ದರು. ಇದಕ್ಕೆ ಯುವಕ ಒಪ್ಪಿರಲಿಲ್ಲ. ನಾನು ಅನಾಥಾಶ್ರಮವೊಂದರಲ್ಲಿ ಆಚರಣೆ ನಡೆಸಿಕೊಳ್ಳುವುದಾಗಿ ಹೇಳಿದ್ದ. ಇದರಿಂದ ಯುವತಿ ನೊಂದಿದ್ದರು. ಸೋಮವಾರ ಬೆಳಿಗ್ಗೆ ತರಗತಿಗೆ ಹಾಜರಾಗಿದ್ದರು. ನಂತರ, ಕೊಠಡಿಗೆ ಬಂದು ಕೈ ಕೊಯ್ದುಕೊಂಡಿದ್ದರು. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಮರಣ ಪತ್ರ ದೊರಕಿದೆ. ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.