ADVERTISEMENT

ನೀರಿನ ಬೇಡಿಕೆ ಪೂರೈಸಲು ಅಂತರ್ಜಲ ಕಳ್ಳತನ

ಪೀರ್‌ ಪಾಶ, ಬೆಂಗಳೂರು
Published 19 ಮಾರ್ಚ್ 2019, 20:18 IST
Last Updated 19 ಮಾರ್ಚ್ 2019, 20:18 IST
ನಾಗವಾರದಲ್ಲಿ ಕೊಳವೆ ಸೋರಿಕೆಯ ನೀರನ್ನು ಒಯ್ಯುತ್ತಿರುವ ಕೊಳೆಗೇರಿಯ ಮಕ್ಕಳು
ನಾಗವಾರದಲ್ಲಿ ಕೊಳವೆ ಸೋರಿಕೆಯ ನೀರನ್ನು ಒಯ್ಯುತ್ತಿರುವ ಕೊಳೆಗೇರಿಯ ಮಕ್ಕಳು   

ಬೆಂಗಳೂರು: ಅಂತರ್ಜಲ ಕಾಯ್ದಿಟ್ಟುಕೊಳ್ಳುವ ಸಲುವಾಗಿ ಮಾರ್ಚ್‌ ಆರಂಭದಿಂದ ಜೂನ್‌ ವರೆಗೆ ಕೊಳವೆ ಬಾವಿಗಳನ್ನು ಕೊರೆಯುವುದಕ್ಕೆ ಅನುಮತಿ ನೀಡದಿರಲು ಜಲಮಂಡಳಿ ನಿರ್ಧಾರ ತಳೆದಿದ್ದರೂ, ಕೊಳವೆಬಾವಿಗಳನ್ನುಅಕ್ರಮವಾಗಿ ತೊಡಿಸುವ ಕಾರ್ಯ ನಗರದಲ್ಲಿ ಅವ್ಯಾಹತವಾಗಿ ನಡೆದಿದೆ.

ಜಲಮಂಡಳಿಯಿಂದ ನಿರ್ಬಂಧವಿದ್ದರೂ ಕೊಳವೆ ಬಾವಿಗಳನ್ನು ಕೊರೆಯಲು ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಗ್ರಾಹಕರ ಸೋಗಿನಲ್ಲಿ ಕಂಪನಿಗಳಿಗೆ ಕರೆ ಮಾಡಿ, ಕೊಳವೆಬಾವಿ ಕೊರೆಸುವ ಕುರಿತು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ಕೊಳವೆಬಾವಿ ಕೊರೆಸಲು ಪ್ರಕ್ರಿಯೆಯನ್ನು ಒಂದೇ ವಾರದಲ್ಲಿ ಮುಗಿಸಿಕೊಡುತ್ತೇವೆ’ ಎಂದು ಹೇಳಿದರು. ಜಲಮಂಡಳಿ ಮತ್ತು ನಿರ್ದೇಶನಾಲಯ ಅನುಮತಿ ಪತ್ರ ನೀಡುತ್ತಿಲ್ಲವಲ್ಲ ಎಂದರೆ, ‘ಎಕ್ಸಟ್ರಾ ಚಾರ್ಚ್‌ ಕೊಟ್ಟರೆ ವಾರದಲ್ಲೇ ಕೆಲಸ ಮುಗಿಯುತ್ತದೆ’ ಎಂಬ ಉತ್ತರ ಸಿಕ್ಕಿತು.

ಈ ಕುರಿತು ಜಲಮಂಡಳಿಗೆ ಕೇಳಿದರೆ ‘ಕೊಳವೆ ಬಾವಿ ಕೊರೆಸುವ ಬಗ್ಗೆ ಅಂತಿಮ ತೀರ್ಮಾನ ಅಂತರ್ಜಲ ನಿರ್ದೇಶನಾಲಯ ಕೈಗೊಳ್ಳುತ್ತದೆ. ಅಲ್ಲಿಯೇ ಕೇಳಿ’ ಎಂಬ ಉತ್ತರ ಬಂತು. ನಿರ್ದೇಶನಾಲಯದಲ್ಲಿ ಕೇಳಿದರೆ, ‘ಸ್ಥಳ ಪರಿಶೀಲನೆ ಮಾಡುವುದಷ್ಟೇ ನಮ್ಮ ಕೆಲಸ, ಅನುಮತಿ ಪತ್ರ ನೀಡುವ ನಿರ್ಧಾರವನ್ನು ಜಲಮಂಡಳಿಯ ಅಧಿಕಾರಿಗಳೇ ಮಾಡುತ್ತಾರೆ. ಅವರನ್ನೇ ಕೇಳಿ’ ಎಂಬ ಸಮಜಾಯಿಷಿ ಸಿಕ್ಕಿತು. ಈ ಎರಡು ಸರ್ಕಾರಿ ಸಂಸ್ಥೆಗಳ ಜಾಣ ಕುರುಡುತನದ ಮುಂದೆಯೇ ಅಂತರ್ಜಲ ಕಳ್ಳತನವಾಗುತ್ತಿದೆ.

ADVERTISEMENT

‘ಅನುಮತಿ ಪತ್ರದ ಮಾಹಿತಿ ಇಲ್ಲ’: ಈ ಬಗ್ಗೆ ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರನ್ನು ಕೇಳಿದಾಗ, ‘ಕೊಳವೆ ಬಾವಿಗಳಿಗೆ ಅನುಮತಿ ಪತ್ರ ನೀಡುವುದನ್ನು ನಿಲ್ಲಿಸಿರುವ ಕುರಿತು ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಂಡಳಿಯ ಎಂಜಿನಿಯರ್‌ ಇನ್‌ ಚೀಫ್‌ ಕೆಂಪರಾಮಯ್ಯ ಅವರನ್ನು ವಿಚಾರಿಸಿ’ ಎಂದರು. ಕೆಂಪರಾಮಯ್ಯ ಅವರು ಕರೆ ಸ್ವೀಕರಿಸಲಿಲ್ಲ.

ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಿಂದ ಕಸವನಹಳ್ಳಿಯಲ್ಲಿ ಕಳೆದ ವಾರ ಪಾದಚಾರಿ ಮಾರ್ಗದ ಮೇಲೆಯೇ ಕೊಳವೆಬಾವಿ ಕೊರೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೆಚ್ಚಿದ ನೀರಿನ ಬೇಡಿಕೆ: ನಗರದ ಕೊಳವೆಬಾವಿಗಳು ಬತ್ತುತ್ತಿರುವುದರಿಂದ ಕಾವೇರಿ ನೀರಿನ ಮೇಲಿನ ಅವಲಂಬನೆ ಮತ್ತಷ್ಟು ಹೆಚ್ಚಿದೆ.

ನಿವಾಸಿಗಳು ಕಾವೇರಿ ನೀರನ್ನು ಯಥೇಚ್ಛವಾಗಿ ಸಂಗ್ರಹಿಸುವುದರಿಂದ, ಎತ್ತರದ ಪ್ರದೇಶಗಳಿಗೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಹಾಗಾಗಿ ಕೊಳವೆ ಮಾರ್ಗದ ಅಂತಿಮ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹಾಗಾಗಿ ಜನರು ಜಲಮಂಡಳಿಯನ್ನು ದೂರುತ್ತಿದ್ದಾರೆ.

‘ಅಗತ್ಯವಿರುವಷ್ಟು ನೀರನ್ನು ಮಾತ್ರ ಶೇಖರಿಸಿಕೊಂಡು, ಸಂಪ್‌ಗಳ ವಾಲ್ವ್‌ಗಳನ್ನು ಬಂದ್‌ ಮಾಡಿ, ಮುಂದಿನ ಮನೆಗೆ ನೀರು ಹರಿಯುವಂತೆ ನೋಡಿಕೊಳ್ಳಿ’ ಎಂದು ಜಲಮಂಡಳಿ ಸಿಬ್ಬಂದಿ ಗ್ರಾಹಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.


ಅನುಮತಿ ಪತ್ರ ಪಡೆಯುವ ಬಗೆ

ಕೊಳವೆಬಾವಿ ಕೊರೆಸಲು ಬಂದ ಅರ್ಜಿಗಳನ್ನು ಕ್ರೋಡೀಕರಿಸಿ ಜಲಮಂಡಳಿ ಅಂತರ್ಜಲ ನಿರ್ದೇಶನಾಲಯಕ್ಕೆ ಕಳುಹಿಸಬೇಕು. ಅಲ್ಲಿನ ಭೂವಿಜ್ಞಾನಿಯೊಬ್ಬರು ಸ್ಥಳ ಪರಿಶೀಲನೆ ಮಾಡಿ, ವರದಿ ನೀಡಬೇಕು. ತದನಂತರ ಜಲಮಂಡಳಿಯ ಅಧಿಕಾರಿ ಮತ್ತು ಭೂವಿಜ್ಞಾನಿ ಅವರನ್ನೊಳಗೊಂಡ ತಂಡವು ಸ್ಥಳ ಪರಿಶೀಲಿಸಿ ಕೊಳವೆಬಾವಿ ಕೊರೆಸಲು ‘ಅನುಮತಿ ಪತ್ರ’ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು.

ಇಲ್ಲಿದೆ ನೀರಿನ ಸಮಸ್ಯೆ

ಲೊಟ್ಟೆಗೊಲ್ಲನಹಳ್ಳಿಯಲ್ಲಿ ಎರಡು ವಾರಗಳಿಂದ ನೀರಿನ ಸರಬರಾಜು ಸರಿಯಾಗಿ ಆಗುತ್ತಿಲ್ಲ. ಒಳಚರಂಡಿಗಾಗಿ ರಸ್ತೆ ಅಗೆದಿದ್ದಾರೆ. ಹಾಗಾಗಿ ಟ್ಯಾಂಕರ್‌ಗಳ ಸಂಚಾರಕ್ಕೂ ತೊಂದರೆಯಾಗಿದೆ.

ಕಾರ್ತಿಕಾ, ಹೆಬ್ಬಾಳ

**

ಕಾವೇರಿ ನೀರನ್ನು ಎರಡು ದಿನಗಳಿಗೆ ಒಮ್ಮೆ ಮೂರು ಗಂಟೆ ಬಿಡುತ್ತಾರೆ. ಆ ನೀರು ಸಹ ರಭಸವಾಗಿ ಬರಲ್ಲ. ಮನೆಗೆ ಬೇಕಾದಷ್ಟು ನೀರು ಸಿಗುತ್ತಿಲ್ಲ.

ವಿನಿತಾ, ಬಸವರಾಜು ಬಡಾವಣೆ, ಜೆ.ಪಿ.ನಗರ 6ನೇ ಹಂತ

**

‘ಕೊಳವೆಬಾವಿ ನೀರು ಕುಡಿಯಲು ಯೋಗ್ಯವಲ್ಲ’

ಸಾವಿರಾರು ರೂಪಾಯಿ ಖರ್ಚು ಮಾಡಿ, ಸುಮಾರು 800ರಿಂದ 1,000 ಅಡಿ ತೂತು ಕೊರೆದು ಪಡೆಯುವ ಬಹುತೇಕ ಕೊಳವೆಬಾವಿಗಳ ನೀರು ಸಹ ಕುಡಿಯಲು ಯೋಗ್ಯವಿಲ್ಲ.

‘ಬೆಂಗಳೂರಿನ ಕೊಳವೆಬಾವಿಗಳ ನೀರಿನಲ್ಲಿ ನೈಟ್ರೇಟ್‌, ಗಡಸುತನ ಮತ್ತು ಟಿಡಿಎಸ್‌ ಪ್ರಮಾಣ (ನೀರಿನಲ್ಲಿ ಬೇರೆತಿರುವ ಖನಿಜಾಂಶ, ಉಪ್ಪಿನಾಂಶ, ಲೋಹಾಂಶ) ಹೆಚ್ಚಿದೆ. ಇದನ್ನು ಶುದ್ಧೀಕರಿಸದೆ ಕುಡಿಯುವುದರಿಂದ ಹೊಟ್ಟೆ, ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ’ ಎಂದು ಅಂತರ್ಜಲ ನಿರ್ದೇಶನಾಲಯದಲ್ಲಿನ ತಜ್ಞರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.