
ಭುವನೇಶ್ವರಿ
ಬೆಂಗಳೂರು: ಪಿಸ್ತೂಲ್‌ನಿಂದ ಪತ್ನಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆ ಬಳಿಕ ಆರೋಪಿ ಬಾಲಮುರುಗನ್‌ನಿಂದ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ವಶಪಡಿಸಿಕೊಂಡಿದ್ದು, ಅದು ಪರವಾನಗಿ ಹೊಂದಿರುವುದೇ ಇಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಖರೀದಿಸಲಾಗಿದೆಯೇ? ಎಲ್ಲಿ ಖರೀದಿಸಲಾಗಿದೆ? ಯಾರಾದರೂ ತಂದು ಕೊಟ್ಟಿದ್ದಾರಾ? ಎಂಬ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಮಂಗಳವಾರ ರಾತ್ರಿಯಿಂದಲೇ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ, ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ನ್ಯಾಯಾಲಯದ ಮೂಲಕ ಪತ್ನಿ ವಿಚ್ಛೇದನ ನೋಟಿಸ್ ಕಳುಹಿಸಿದ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಸ್ಥಳ ಮಹಜರು ನಡೆಸಿರುವ ಪೊಲೀಸರು, ಕೊಲೆಯಾದ ಭುನವೇಶ್ವರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದರು.
ತಮಿಳುನಾಡಿನ ಬಾಲಮುರುಗನ್ ಹಾಗೂ ಭುವನೇಶ್ವರಿ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 12 ವರ್ಷದ ಮಗ ಹಾಗೂ 4 ವರ್ಷದ ಮಗಳಿದ್ದಾರೆ. ಭುವನೇಶ್ವರಿ ಅವರು ಬೇರೊಬ್ಬರ ಜತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿ ಶಂಕಿಸುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇದರಿಂದ ಬೇಸತ್ತ ಪತ್ನಿ, ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಇದಕ್ಕೆ ಆತ ಒಪ್ಪಿರಲಿಲ್ಲ. ವಾರದ ಹಿಂದೆ ಪತ್ನಿಯಿಂದ ವಿಚ್ಛೇದನ ನೋಟಿಸ್ ಪಡೆದ ಆರೋಪಿ, ಕೊಲೆ ಸಂಚು ರೂಪಿಸಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಸವೇಶ್ವರ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಭುವನೇಶ್ವರಿ ಸಹಾಯಕ ವ್ಯವಸ್ಥಾಪಕರಾಗಿದ್ದರು. ಬಾಲಮುರುಗನ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ವೈಟ್‌ಫೀಲ್ಡ್‌ನಲ್ಲಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕೆಲ ತಿಂಗಳಿನಿಂದ ಪತ್ನಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು. ಆರೋಪಿಗೆ ಪತ್ನಿ, ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿಯೇ ಇರಲಿಲ್ಲ.
ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಭುವನೇಶ್ವರಿಯತ್ತ ಐದು ಸುತ್ತು ಗುಂಡು ಹಾರಿಸಿದ್ದು, ತಲೆ ಮತ್ತು ಕೈಗಳಿಗೆ ಗುಂಡು ತಗುಲಿದೆ. ಗುಂಡಿನ ದಾಳಿ ಕಂಡ ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿ ಸಮೀಪದ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗಮಧ್ಯೆ ಮೃತಪಟ್ಟರು.
‘ಬಾಲಮುರುಗನ್ ಕೆಲಸ ಬಿಟ್ಟಿದ್ದರಿಂದ ತಂಗಿಯೇ ದುಡಿದು ಸಂಸಾರ ನಿಭಾಯಿಸುತ್ತಿದ್ದಳು. ಆಕೆ ಮಕ್ಕಳ ಜೊತೆ ಮಾತನಾಡಿದರೂ ಜಗಳ ಮಾಡುತ್ತಿದ್ದ. ಈ ಹಿಂದೆ ಚಾಕುವಿನಿಂದ ಇರಿಯಲು ಯತ್ನಿಸಿದ್ದ. ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಆಕ್ರೋಶಗೊಂಡು, ಈ ಕೃತ್ಯ ಎಸಗಿದ್ದಾನೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ, ನ್ಯಾಯ ಬೇಕು’ ಎಂದು ಮೃತ ಭುವನೇಶ್ವರಿ ಸಹೋದರ ಪ್ರಕಾಶ್ ಕಣ್ಣೀರಿಟ್ಟಿರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.