ಬೆಂಗಳೂರು: ಲಾಲ್‌ಬಾಗ್ ಕೆರೆಯಲ್ಲಿ ದೊರೆತ ಮಹಿಳೆಯ ಶವದ ಗುರುತು ಪತ್ತೆಹಚ್ಚಿರುವ ಪೊಲೀಸರು, ಮೃತಳನ್ನು ನೇಪಾಳದ ಜೇನಿ ಶಾ ಎಂದು ಗುರುತಿಸಿದ್ದಾರೆ.
ಆಗಸ್ಟ್ 23ರಂದು ಲಾಲ್‌ಬಾಗ್‌ನ ಕೆರೆಯಲ್ಲಿ ಶವ ಗಮನಿಸಿದ ಭದ್ರತಾ ಸಿಬ್ಬಂದಿ, ಸಿದ್ದಾಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
‘ಪತಿ ನಬ್‌ರಾಜ್‌ರೊಂದಿಗೆ ಸರ್ಜಾಪುರದಲ್ಲಿ ವಾಸವಿದ್ದ ಜೇನಿ ಶಾ, ನಾಲ್ಕು ದಿನಗಳ ಹಿಂದೆಯಷ್ಟೇ ವಾಣಿವಿಲಾಸ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗುವಿನ ಆರೋಗ್ಯ ಸರಿಯಿರಲಿಲ್ಲ ಎಂದು ಮಾನಸಿಕವಾಗಿ ನೊಂದಿದ್ದಳು. ಪತ್ನಿ ಆಸ್ಪತ್ರೆಯಿಂದ ನಾಪತ್ತೆಯಾಗಿರುವ ಬಗ್ಗೆ ಆಗಸ್ಟ್ 23ರಂದು ಪತಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ಲಾಲ್‌ಬಾಗ್ ಕೆರೆಯಲ್ಲಿ ಪತ್ತೆಯಾದ ಮಹಿಳೆಯ ಮೃತದೇಹವನ್ನು ಪತಿ ಗುರುತಿಸಿದ್ದಾರೆ. ಮಗುವಿನ ಆರೋಗ್ಯ ಸರಿಯಾಗಿಲ್ಲ ಎಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.
‘ಮೃತ ಜೇನಿ ಶಾ ಅವರ ಮಗು ಆಸ್ಪತ್ರೆಯಲ್ಲಿಯೇ ಇದೆ. ಅವರ ಪತಿ ನಬ್‌ರಾಜ್ ಅವರ ಹೇಳಿಕೆ ಪಡೆಯಲಾಗಿದೆ. ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ಪತ್ನಿ ಜೇನಿ ಶಾ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ನೇಪಾಳದಿಂದ ಜೇನಿ ಶಾ ಪೋಷಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿದ್ದಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.