
ಜೈಲು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕೆರೆ ಒತ್ತುವರಿ ಮಾಡಿದ್ದ ಮಹಿಳೆಯೊಬ್ಬರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಯಶವಂತಪುರ ಹೋಬಳಿ ಅಬ್ಬಿಗೆರೆ ಗ್ರಾಮದ ನಿವಾಸಿ ಜಿ.ಆರ್.ವಿಜಯಲಕ್ಷ್ಮಿ ಸದಾಶಿವರೆಡ್ಡಿ ಶಿಕ್ಷೆಗೆ ಒಳಗಾದವರು.
ಗ್ರಾಮದ ಸರ್ವೆ ನಂ.75ರಲ್ಲಿರುವ ಕೆರೆಗೆ ಸೇರಿದ 26.06 ಎಕರೆ ಜಮೀನಿನಲ್ಲಿ 9 ಗುಂಟೆಯನ್ನು ವಿಜಯಲಕ್ಷ್ಮಿ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಉತ್ತರ ತಾಲ್ಲೂಕು ತಹಶೀಲ್ದಾರ್ ದೂರು ನೀಡಿದ್ದರು.
2018ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದ್ದರಿಂದ ವಿಜಯಲಕ್ಷ್ಮಿ ಅವರಿಗೆ ಶಿಕ್ಷೆ ವಿಧಿಸಿ, ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯ ಪಾಟೀಲ ನಾಗಲಿಂಗನಗೌಡ ಹಾಗೂ ಕಂದಾಯ ಸದಸ್ಯ ಕೆ.ಎಚ್.ಅಶ್ವತ್ಥನಾರಾಯಣಗೌಡ ಅವರಿದ್ದ ಪೀಠವು ತೀರ್ಪು ನೀಡಿದೆ.
ವಿಜಯಲಕ್ದ್ಮಿ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆ , ₹5 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ಆಗದೇ ಇದ್ದರೆ 3 ತಿಂಗಳು ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಒತ್ತುವರಿ ಮಾಡಿಕೊಂಡಿರುವ ಕೆರೆಯ ಜಮೀನನ್ನು ಕೂಡಲೇ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಉತ್ತರ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.