
ಬೆಂಗಳೂರು: ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ್ದ ಸಹೋದ್ಯೋಗಿಯನ್ನು ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಮತಾ (39) ಕೊಲೆಯಾದವರು.
ಕೊಲೆಯ ಆರೋಪದ ಅಡಿ ಮಮತಾ ಅವರೊಂದಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಹಾಸನದ ಅರಸೀಕೆರೆಯ ಕತ್ರಿಗುಪ್ಪೆ ನಿವಾಸಿ ಸುಧಾಕರ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಎಸ್.ಲೇಔಟ್‌ನ ಪ್ರಗತಿಪುರದ ಮನೆಯಲ್ಲಿ ಡಿ.24ರ ರಾತ್ರಿ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ಆರೋಪಿ ಪರಾರಿ ಆಗಿದ್ದ ಎಂದು ಪೊಲೀಸರು ಹೇಳಿದರು.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಮಮತಾ ಅವರು ಕೆಲಸ ಮಾಡುತ್ತಿದ್ದರು. ತನ್ನ ಸ್ನೇಹಿತೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಡಿ.24ರಂದು ಮಮತಾ ಅವರ ಸ್ನೇಹಿತೆ ಊರಿಗೆ ತೆರಳಿದ್ದರು. ಅಂದು ಮನೆಗೆ ನುಗ್ಗಿದ್ದ ಆರೋಪಿ ಕೊಲೆ ಮಾಡಿ ಪರಾರಿ ಆಗಿದ್ದ ಎಂದು ಪೊಲೀಸರು ಹೇಳಿದರು.
ಮದುವೆ ಆಗುವಂತೆ ಒತ್ತಡ ಹೇರಿದ್ದ ಮಹಿಳೆ: ಸುಧಾಕರ್ ಹಾಗೂ ಮಮತಾ ಇಬ್ಬರೂ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ. ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಬೇರೆ ಯುವತಿಯ ಜತೆಗೆ ಆರೋಪಿ ಸುಧಾಕರ್ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ತಿಳಿದಿದ್ದ ಮಮತಾ ಅವರು ತನ್ನನ್ನೇ ಮದುವೆ ಆಗುವಂತೆ ಸುಧಾಕರ್ ಮೇಲೆ ಒತ್ತಡ ಹೇರುತ್ತಿದ್ದರು. ಇದರಿಂದ ಭಯಗೊಂಡು ಮಮತಾ ಅವರು ನೆಲಸಿದ್ದ ಮನೆಗೆ ಆರೋಪಿ ಬಂದು ಕೊಲೆ ಮಾಡಿ ಪರಾರಿ ಆಗಿದ್ದ ಎಂದು ಪೊಲೀಸರು ಹೇಳಿದರು.
Cut-off box - ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ? ಕೊಲೆ ಮಾಡಿದ ಬಳಿಕ ಆರೋಪಿ ಸುಧಾಕರ್ ತನಗೇನೂ ಗೊತ್ತೇ ಇಲ್ಲ ಎಂಬಂತೆ ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ. ಮೃತದೇಹ ಸ್ಥಳಾಂತರಿಸುವ ವೇಳೆಯೂ ಜೊತೆಗಿದ್ದ. ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಮತಾ ಅವರ ಮೊಬೈಲ್ ಕರೆಗಳ ವಿವರಗಳನ್ನು ಸಂಗ್ರಹಿಸಿದ್ದರು. ಜೊತೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನೂ ಪರಿಶೀಲಿಸಿದ್ದರು. ಆ ವೇಳೆ ಸುಧಾಕರ್ ಮನೆಗೆ ಬಂದು ಹೋಗಿರುವುದು ದೃಢಪಟ್ಟಿತ್ತು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.