ನವದೆಹಲಿ: ಸರ್ಕಾರಿ ವೈದ್ಯರನ್ನು ನಗರದಿಂದ ಹೊರಗೆ ವರ್ಗಾವಣೆ ಮಾಡುವುದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ‘ಬೆಂಗಳೂರಿನ ಕಾಸ್ಮೊಪಾಲಿಟನ್ ಜೀವನವು ಅತ್ಯಾಕರ್ಷಕ’ ಎಂದು ಬಣ್ಣಿಸಿದೆ.
ಯಾವುದೇ ಪೂರ್ವಾಗ್ರಹದಿಂದ ವೈದ್ಯರನ್ನು ಬೆಂಗಳೂರಿನಿಂದ ಹೊರಗೆ ವರ್ಗಾಯಿಸುತ್ತಿಲ್ಲ ಎಂಬುದನ್ನು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಗಮನಿಸಿದೆ.
‘ಬೆಂಗಳೂರಿನ ಕಾಸ್ಮೊಪೊಲಿಟನ್ ಜೀವನವು ತುಂಬಾ ಆಕರ್ಷಕವಾಗಿದೆ. ಕರ್ನಾಟಕದ ಇತರ ಪ್ರದೇಶಗಳು ಸಹ ಅಭಿವೃದ್ಧಿ ಹೊಂದಿವೆ. ನೀವು ವರ್ಗಾವಣೆ ವಿರೋಧಿಸಿದರೆ ಇತರರ ಕಥೆ ಏನು. ನಾವು ಮೇಲ್ಮನವಿ ಸ್ವೀಕರಿಸಲು ಒಲವು ತೋರುವುದಿಲ್ಲ’ ಎಂದು ಪೀಠ ಹೇಳಿದೆ.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಳಗಿನ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಿಸುವ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ವರ್ಗಾವಣೆ ನಿಯಂತ್ರಣ) ನಿಯಮ– 2025 ಪ್ರಶ್ನಿಸಿ ವೈದ್ಯರ ಗುಂಪೊಂದು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ನಿಯಮಗಳಿಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು.
ಕರಡು ನಿಯಮಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೇವಲ ಒಂದು ವಾರದ ಕಾಲಾವಕಾಶ ನೀಡಲಾಗಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.