ADVERTISEMENT

₹ 28 ಸಾವಿರ ಲಂಚ: ಬೆಸ್ಕಾಂ ಎಇಇ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 20:14 IST
Last Updated 7 ಮಾರ್ಚ್ 2023, 20:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಟ್ಟಡವೊಂದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಮಂಜೂರಾತಿ ನೀಡಲು ₹ 28,000 ಲಂಚ ಪಡೆಯುತ್ತಿದ್ದ ಬೆಸ್ಕಾಂ ಜಿಗಣಿ ಕಾರ್ಯಾಚರಣೆ ಮತ್ತು ನಿರ್ವಹಣೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಭರತ್‌ ಚೌಹಾಣ್‌ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆನೇಕಲ್‌ ತಾಲ್ಲೂಕಿನ ಜಿಗಣಿ ಸಮೀಪದ ನಂಜಾಪುರ ನಿವಾಸಿ ಶಶಿಶೇಖರ್‌ ಎಂಬುವವರು ಕಟ್ಟಡೊಂದಕ್ಕೆ ವಿದ್ಯುತ್‌ ಸಂಪರ್ಕಕ್ಕೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಎಇಇ ಅವರನ್ನು ಭೇಟಿಮಾಡಿದ್ದ ಅರ್ಜಿದಾರರು, ಮುಂದಿನ ಪ್ರಕ್ರಿಯೆ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಮಂಜೂರಾತಿ ನೀಡಲು ₹ 28,000 ಲಂಚ ಕೊಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಘಟಕಕ್ಕೆ ದೂರು ಸಲ್ಲಿಸಿದ್ದರು.

ಮಂಗಳವಾರ ಕಚೇರಿಗೆ ಬಂದು ಲಂಚದ ಹಣ ತಲುಪಿಸುವಂತೆ ಎಇಇ ಸೂಚಿಸಿದ್ದರು. ಅದರಂತೆ ಶಶಿಶೇಖರ್‌ ಬೆಸ್ಕಾಂ ಜಿಗಣಿ ಉಪ ವಿಭಾಗದ ಕಚೇರಿಗೆ ಹೋಗಿ ಹಣ ತಲುಪಿಸಿದರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಭರತ್‌ ಚೌಹಾಣ್‌ ಅವರನ್ನು ಬಂಧಿಸಿದರು ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲೋಕಾಯುಕ್ತದ ಬೆಂಗಳೂರು ಗ್ರಾಮಾಂತರ ಎಸ್‌ಪಿ ಶ್ರೀನಾಥ್‌ ಜೋಶಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಟಿ.ಸಿ. ವೆಂಕಟೇಶ್‌ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.