ADVERTISEMENT

ಬೆಂಗಳೂರಿನ 7,250 ಕಿ.ಮೀ ಓವರ್‌ಹೆಡ್ ವಿದ್ಯುತ್ ತಂತಿ ಭೂಗತ ತಂತಿಯಾಗಿ ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 10:06 IST
Last Updated 10 ಡಿಸೆಂಬರ್ 2020, 10:06 IST
ಪ್ರಾತಿನಿಧಿಕ ಚಿತ್ರ, ಕೃಪೆ: ಐಸ್ಟಾಕ್ ಫೋಟೋ
ಪ್ರಾತಿನಿಧಿಕ ಚಿತ್ರ, ಕೃಪೆ: ಐಸ್ಟಾಕ್ ಫೋಟೋ   

ಬೆಂಗಳೂರು: ನಗರದಲ್ಲಿವಿದ್ಯುತ್ ಸರಬರಾಜು ವ್ಯವಸ್ಥೆಯನ್ನ ಮತ್ತಷ್ಟು ಸುರಕ್ಷಿತ ಮತ್ತು ಅನುಕೂಲಕರವಾಗಿಸಲು ನಗರದ 6 ವಲಯಗಳ 7,250 ಕಿ.ಮೀ ಓವರ್ ಹೆಡ್ ವಿದ್ಯುತ್ ತಂತಿ ಮತ್ತು 2,393 ಕಿಮೀ 11 ಕೆವಿ ಹೈ ಟೆನ್ಷನ್ ತಂತಿಗಳನ್ನ ₹1400 ಕೋಟಿ ವೆಚ್ಚದಲ್ಲಿ ಭೂಗತ ತಂತಿಗಳಾಗಿ ಪರಿವರ್ತಿಸಲು ಬೆಸ್ಕಾಂ ಮುಂದಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಆರು ವಿಭಾಗಗಳಲ್ಲಿ ಯಾಂತ್ರೀಕೃತ ವಿತರಣಾ ವ್ಯವಸ್ಥೆ (ಡಿಎಎಸ್) ಜೊತೆಗೆ ಕೇಬಲ್‌ಗಳ ಪರಿವರ್ತನೆ ಆರಂಭಿಸಲು ನಿರ್ಧರಿಸಿದೆ.ಮುಂದಿನ ಪೀಳಿಗೆಯ ವ್ಯವಸ್ಥೆಯಾಗಿರುವ ಡಿಎಎಸ್, ದಕ್ಷ ವಿದ್ಯುತ್ ಪ್ರಸರಣಕ್ಕಾಗಿ ಸ್ವಿಚ್‌ಗೇರ್‌ಗಳ ಮೇಲ್ವಿಚಾರಣೆ ಮತ್ತು ನಿಯಂತ್ರಿಸುವುದು ಇದರ ಕೆಲಸವಾಗಿದೆ.

ಇಂದಿರಾನಗರ, ಜಯನಗರ, ಶಿವಾಜಿನಗರ, ಕೋರಮಂಗಲ, ವೈಟ್ ಫೀಲ್ಡ್, ಸರ್ಜಾಪುರ ರಸ್ತೆ ಮತ್ತು ಹೊಸೂರು ವಿಭಾಗಗಳಲ್ಲಿ ಕಾಮಗಾರಿ ಆರಂಭವಾಗಲಿರುವ ಈ ಯೋಜನೆಗೆ ಏಷಿಯನ್ ಡೆವಲೊಪ್ಮೆಂಟ್ ಬ್ಯಾಂಕ್ ₹1,401.35 ಕೋಟಿ ಸಾಲವನ್ನ ಮಂಜೂರು ಮಾಡಿದೆ.

ADVERTISEMENT

ಓವರ್ ಹೆಡ್ ತಂತಿಗಳನ್ನ ಭೂಗತ ತಂತಿಗಳಾಗಿ ಪರಿವರ್ತಿಸುವುದರಿಂದ ಕಲ್ಲಿದ್ದಲು ಇತ್ಯಾದಿ ಪಳೆಯುಳಿಕೆ ಇಂಧನಗಳ ಅನಗತ್ಯ ವಿತರಣಾ ವೆಚ್ಚ ತಪ್ಪುತ್ತದೆ ಎಂದು ಬೆಸ್ಕಾ ತಿಳಿಸಿದೆ.

`ಹೊಸ ಯೋಜನೆಯಲ್ಲಿ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ವಿದ್ಯುತ್ ಸರಬರಾಜಿನ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ತುಂಬಾ ಕಳಪೆಯಾಗಿದೆ. ಅಧಿಕ ಪ್ರಮಾಣದ ಅಕ್ರಮ ಸಂಪರ್ಕ ಮತ್ತು ಓವರ್ ಲೋಡೆಡ್ ಕಂಡಕ್ಟರ್‌ಗಳಿರುವುದರಿಂದಾಗಿ ಅಧಿಕ ಪ್ರಮಾಣದ ತಾಂತ್ರಿಕ ಮತ್ತು ವಾಣಿಜ್ಯದ ದೃಷ್ಟಿಯಿಂದ ನಷ್ಟ ಆಗುತ್ತಿದೆ.ಆಧುನಿಕ ವಿದ್ಯುತ್ ವಿತರಣಾ ಜಾಲಕ್ಕೆ ಸದ್ಯದ ಸರಾಸರಿ ವಿದ್ಯುತ್ ನಿಲುಗಡೆ ಅವಧಿ ಸ್ವೀಕಾರರ್ಹವಲ್ಲದ ಮಟ್ಟಕ್ಕೆ ಹೆಚ್ಚಿದೆ’ಎನ್ನುತ್ತದೆ ಬೆಸ್ಕಾಂ.

ಈ ಯೋಜನೆಯ ಮುಖ್ಯ ಅನುಕೂಲವೆಂದರೆ ವಿದ್ಯುತ್ ಅವಘಡಗಳು ತಪ್ಪುತ್ತವೆ. ವಿಶೇಷವಾಗಿ ಮಕ್ಕಳು ಹೈವೋಲ್ಟೇಜ್ ವೈರ್ ಸಂಪರ್ಕಕ್ಕೆ ಬರುವುದಿಲ್ಲ. ಜೊತೆಗೆ ಕೇಬಲ್ ಮುಟ್ಟಿ ಗಾಯಗಳಾಗುವುದು, ಪವರ್ ಕಟ್ ಸಮಸ್ಯೆ ನಿವಾರಣೆಯಾಗುತ್ತದೆ. ಕಳೆದ ವರ್ಷ ನಿರಂತರ ವಿದ್ಯುತ್ ಅವಘಡಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಬೆಸ್ಕಾಂ ಅಧಿಕಾರಿಗಳು ಹೈಟೆನ್ಷನ್ ವೈರ್ ಮಾರ್ಗದಲ್ಲಿ 8,000 ಮನೆ ನಿರ್ಮಿಸಿರುವುದನ್ನ ಗುರುತಿಸಿದ್ದಾರೆ.

ಮುಂದಿನ ಕೆಲ ದಿನಗಳಲ್ಲಿ ಆರಂಭವಾಗಲಿರುವ ಈ ಯೋಜನೆಗೆ ಬೆಸ್ಕಾಂ 18 ತಿಂಗಳ ಗಡುವು ವಿಧಿಸಿದೆ. ಈಗಿರುವ ಓವರ್ ಹೆಡ್ ಲೈನ್ ಮಾರ್ಗದಲ್ಲೇ 7241 ಕಿಮೀ ಭೂಗತ ಕೇಬಲ್ ಹಾಕಲಾಗುತ್ತದೆ. ಖಚಿತ ದೂರವನ್ನು ಗುತ್ತಿಗೆದಾರರು ಅಳತೆ ಮಾಡಲಿದ್ದಾರೆ.

ಇದರ ಜೊತೆಗೆ, ಬೆಸ್ಕಾಂ "ಕಂದಕ ರಹಿತ ತಂತ್ರಜ್ಞಾನ" ವನ್ನು ಸಹ ಅಳವಡಿಸಿಕೊಳ್ಳುತ್ತಿದೆ, ಇದು ಮರಗಳನ್ನು ಕಡಿಯುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.