ಇ.ವಿ. ಚಾರ್ಜಿಂಗ್
ಬೆಂಗಳೂರು: ‘ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಇರುವ 209 ಇ.ವಿ. ಚಾರ್ಜಿಂಗ್ ಕೇಂದ್ರಗಳ ಪೈಕಿ 184 ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ವೇಗವಾಗಿ ಆಗಲಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್ ತಿಳಿಸಿದರು.
‘ಬಸ್, ಟ್ರಕ್ ಸೇರಿದಂತೆ ದೊಡ್ಡ ವಾಹನಗಳಿಗೆ ಚಾರ್ಜ್ ಮಾಡಲು 240 ಕಿ.ವಾ ಸಾಮರ್ಥ್ಯದ ವೇಗದ ಚಾರ್ಜಿಂಗ್ ಪಾಯಿಂಟ್ ಹಾಗೂ ಕಾರು, ದ್ವಿಚಕ್ರ ವಾಹನಗಳಿಗೆ ಚಾರ್ಜ್ ಮಾಡಲು 60ರಿಂದ 120 ಕಿ.ವಾ. ಸಾಮರ್ಥ್ಯದ ಪಾಯಿಂಟ್‌ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಜ್ಯದಲ್ಲಿ ಸದ್ಯಕ್ಕೆ 5,960 ಇ.ವಿ ಚಾರ್ಜಿಂಗ್ ಕೇಂದ್ರಗಳಿವೆ. ಇನ್ನೂ 1,500 ಕೇಂದ್ರಗಳನ್ನು ಸ್ಥಾಪಿಸಲು ಪಿ.ಎಂ ಇ-ಡ್ರೈವ್ ಯೋಜನೆಯಡಿ ಅನುದಾನ ನೀಡುವಂತೆ ಕೇಂದ್ರದ ಬೃಹತ್ ಕೈಗಾರಿಕಾ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಈ ಕೇಂದ್ರಗಳಲ್ಲಿ 30ರಿಂದ 40 ನಿಮಿಷಗಳ ಒಳಗೆ ಚಾರ್ಜ್ ಆಗಲಿದೆ. ಹೀಗಾಗಿ ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲ’ ಎಂದರು.
‘ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಟೆಂಡರ್ ಕರೆಯಲಾಗುವುದು. ಸರ್ಕಾರಿ ಸಂಸ್ಥೆಗಳು ಇರುವ ಜಾಗಗಳಲ್ಲೇ ಇವುಗಳನ್ನು ಸ್ಥಾಪಿಸಲು ಆದ್ಯತೆ ನೀಡಲಾಗುವುದು. ವಿವಿಧ ತೈಲ ಕಂಪನಿಗಳ ಸಹಭಾಗಿತ್ವದಲ್ಲಿ 350ಕ್ಕೂ ಅಧಿಕ ಇ.ವಿ. ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುತ್ತಿದ್ದು, ಇವು ವಿವಿಧ ಹಂತಗಳಲ್ಲಿವೆ’ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರದ ಪಿ.ಎಂ. ಸೂರ್ಯಘರ್ ಯೋಜನೆಯಡಿ ರಾಜ್ಯದಲ್ಲಿ ಒಂದು ಲಕ್ಷ ಮನೆಗಳ ಚಾವಣಿಯಲ್ಲಿ ಸೌರವಿದ್ಯುತ್ ಉತ್ಪಾದಿಸುವ ಗುರಿ ಇದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 30 ಸಾವಿರ ಮನೆಗಳ ಗುರಿ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ ₹30 ಸಾವಿರದಿಂದ ಗರಿಷ್ಠ ₹78 ಸಾವಿರ ಸಹಾಯಧನ ನೀಡಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಂಡು, ಸ್ವಯಂ ಆಗಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದು. ಗ್ರಾಹಕರು ಬಳಕೆ ಮಾಡಿ, ಉಳಿಯುವ ವಿದ್ಯುತ್ ಅನ್ನು ಬೆಸ್ಕಾಂ ಖರೀದಿಸಲಿದೆ’ ಎಂದರು.
ಪಿಎಂ ಕುಸುಮ್–ಸಿ: ಈ ಯೋಜನೆಯಡಿ 3,900 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. 389 ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ 2,400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನುಳಿದ 1,500 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಆಗಬೇಕು.
‘ಬೆಸ್ಕಾಂ ವ್ಯಾಪ್ತಿಯ 50 ಸ್ಥಳಗಳಲ್ಲಿ ಡಿಸೆಂಬರ್ ವೇಳೆಗೆ 250ರಿಂದ 300 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ. ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ನಾಲ್ಕು ಎಕರೆ ಜಾಗ ಬೇಕಾಗುತ್ತದೆ. ಖಾಸಗಿ ಜಾಗವನ್ನು ಗುತ್ತಿಗೆಗೆ ಪಡೆಯಲು ಅವಕಾಶ ಇದ್ದು, ಎಕರೆಗೆ ₹25 ಸಾವಿರ ಬಾಡಿಗೆ ನೀಡಲಾಗುತ್ತದೆ. ಈಗಾಗಲೇ 35 ಸ್ಥಳಗಳನ್ನು ಇದಕ್ಕಾಗಿ ಗುರುತಿಸಲಾಗಿದೆ’ ಎಂದು ತಿಳಿಸಿದರು.
ಕೆರೆ ಜಾಗ ಬಳಕೆ: ‘ಖಾಸಗಿ ಜಾಗ ಸಿಗುತ್ತಿಲ್ಲ. ಹೀಗಾಗಿ ಲಭ್ಯವಿರುವ ಸರ್ಕಾರಿ ಜಾಗದ ಜೊತೆಗೆ, ಕೆರೆಗಳ ಹಿನ್ನೀರಿನ ಆಚೆಗೆ ಇರುವ ಖಾಲಿ ಜಾಗವನ್ನು ಬಳಸಿಕೊಂಡು ಸೌರವಿದ್ಯುತ್ ಉತ್ಪಾದಿಸಲು ನಿರ್ಧರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 15 ಕೆರೆಗಳನ್ನು ಗುರುತಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಕೆರೆಯ ಜಾಗದಲ್ಲಿ ಐದು ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕುಂದಾಣದಲ್ಲೂ ಉತ್ಪಾದನೆಗೆ ಸಿದ್ಧವಾಗಿದೆ’ ಎಂದರು.
‘ಕುಸುಮ್ ಬಿ’: ಈ ಯೋಜನೆಯಡಿ ರಾಜ್ಯದಲ್ಲಿ 40 ಸಾವಿರ ರೈತರ ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಬೆಸ್ಕಾಂ ವ್ಯಾಪ್ತಿಯಲ್ಲಿ 1,100 ಗ್ರಾಹಕರು ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ 28 ಸಾವಿರ ಕೊಳವೆ ಬಾವಿಗಳಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.