ADVERTISEMENT

ಬೆಸ್ಕಾಂ: ವಾಟ್ಸ್‌ ಆ್ಯಪ್‌ನಲ್ಲಿ ದೂರು ನೀಡಿ

ಮಳೆಗಾಲದಲ್ಲಿ ಅವಘಡ ತಪ್ಪಿಸಲು ಬೆಸ್ಕಾಂ ಪೂರ್ವ ತಯಾರಿ

​ಪ್ರಜಾವಾಣಿ ವಾರ್ತೆ
Published 14 ಮೇ 2019, 19:56 IST
Last Updated 14 ಮೇ 2019, 19:56 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಮಳೆಗಾಲದಲ್ಲಿ ಸಂಭವಿಸಬಹುದಾದ ವಿದ್ಯುತ್‌ ಅವಘಡಗಳನ್ನು ತಪ್ಪಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ತಯಾರಿ ಆರಂಭಿಸಿದೆ.

ಸುರಕ್ಷತಾ ದೃಷ್ಟಿಯಿಂದ ಕೈಗೊಳ್ಳಬೇಕಾದ ತುರ್ತು ಕೆಲಸಗಳ ಬಗ್ಗೆ ಜನರಿಂದಲೇ ಮಾಹಿತಿ ಪಡೆಯಲು ಮುಂದಾಗಿರುವ ಬೆಸ್ಕಾಂ ಈ ಸಲುವಾಗಿ ಎರಡು ವಾಟ್ಸ್‌ ಆ್ಯಪ್‌ ಸಂಪರ್ಕ ಸಂಖ್ಯೆಗಳನ್ನು ಒದಗಿಸಲಿದೆ. ವಿದ್ಯುತ್‌ ಜಾಲದಲ್ಲಿರುವ ಲೋಪಗಳ ಕುರಿತು ಈ ಸಂಖ್ಯೆಗಳಿಗೆ ಸಂದೇಶ ಹಾಗೂ ಫೋಟೊಗಳನ್ನು ಕಳುಹಿಸಬಹುದು.

‘ವಾಟ್ಸ್‌ ಆ್ಯಪ್‌ ಮೂಲಕ ಬರುವ ದೂರುಗಳನ್ನು ಗಮನಿಸಲು ಪ್ರತ್ಯೇಕ ಸಿಬ್ಬಂದಿ ಇರಲಿದ್ದಾರೆ. ಅವರು ಆದ್ಯತೆ ಮೇರೆಗೆ ದೂರುಗಳನ್ನು ಸ್ಥಳೀಯ ಅಧಿಕಾರಿಗಳಿಗೆ ಮತ್ತು ಅವರ ಮೇಲಧಿಕಾರಿಗಳಿಗೆ ರವಾನಿಸಲಿದ್ದಾರೆ. ಅಧಿಕಾರಿಗಳು ಮತ್ತು ಕೆಳ ಹಂತದ ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲು ಕಾರ್ಯಪ್ರವೃತ್ತರಾಗುತ್ತಾರೆ’ ಎಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಪರ್ಕ) ಬಿ.ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜನರು ಸುಲಭವಾಗಿ ನೆನಪಿಡುವಂತಹ ಸಂಪರ್ಕ ಸಂಖ್ಯೆ ನೀಡಲು ಬಿಎಸ್‌ಎನ್‌ಎಲ್‌ಗೆ ಮನವಿ ಮಾಡಿದ್ದೇವೆ. ಅದನ್ನು ವಾಟ್ಸ್‌ ಆ್ಯಪ್‌ ಸಂಖ್ಯೆಯಾಗಿ ಬಳಸಲಿದ್ದು, ಈ ಬಗ್ಗೆ ಮೇ ಅಂತ್ಯದೊಳಗೆ ಪ್ರಕಟಣೆ ನೀಡುತ್ತೇವೆ’ ಎಂದರು.

‘ಮಳೆಗಾಲದಲ್ಲಿ ಸಾಮಾನ್ಯವಾಗಿ ವಿದ್ಯುತ್‌ ಕಡಿತ ಕುರಿತ ದೂರುಗಳೇ ಹೆಚ್ಚು. ಹಾಗಾಗಿ ಆ ದೂರುಗಳನ್ನು ಆಲಿಸಿ, ದಾಖಲಿಸಿ, ಪರಿಹರಿಸಲು ಬೆಸ್ಕಾಂ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸಂಖ್ಯೆಯನ್ನು (ಒಂದು ಪಾಳಿ) 30ರಿಂದ 40ಕ್ಕೆ ಹೆಚ್ಚಳ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಬೆಸ್ಕಾಂನೊಂದಿಗೆ ಸಮನ್ವಯ ಸಾಧಿಸಲು ಬಿಬಿಎಂಪಿ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿದೆ. ಮಳೆ–ಗಾಳಿಯಿಂದ ಮರಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದರೆ, ತಕ್ಷಣವೇ ಬೆಸ್ಕಾಂ ಗಮನಕ್ಕೆ ತರುವುದುಈ ಅಧಿಕಾರಿಗಳ ಜವಾಬ್ದಾರಿ.

‘ವಿದ್ಯುತ್‌ ಜಾಲದಲ್ಲಿನ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ದುರಸ್ತಿಗೆ ಕ್ರಮ ವಹಿಸಿದ್ದೇವೆ. ಕಂಬ ವಾಲಿರುವ, ತಂತಿಗಳು ಕೆಳಗೆ ಜೋತು ಬಿದ್ದಿರುವ, ತಂತಿಗಳನ್ನು ಕೊಂಬೆಗಳು ಆವರಿಸಿರುವ ಪ್ರಕರಣಗಳು ಇದರಲ್ಲಿ ಸೇರಿವೆ’ ಎಂದು ಕೃಷ್ಣಮೂರ್ತಿ ತಿಳಿಸಿದರು.

‘ಮಳೆಯಿಂದಾಗಿ ವಿದ್ಯುತ್‌ ಜಾಲಕ್ಕೆ ಹೆಚ್ಚು ಹಾನಿಯಾಗಿದ್ದರೆ, ಅದನ್ನು ಮರುಸ್ಥಾಪಿಸಲು ತಾತ್ಕಾಲಿಕವಾಗಿ ಗ್ಯಾಂಗ್‌ಮ್ಯಾನ್‌ಗಳನ್ನು ನಿಯೋಜಿಸಿಕೊಳ್ಳುವ ಅಧಿಕಾರವನ್ನು ಮುಖ್ಯ ಎಂಜಿನಿಯರ್‌ಗಳಿಗೆ ನೀಡಲಾಗಿದೆ’ ಎಂದರು.

***

ವಿದ್ಯುತ್‌ ಜಾಲದಲ್ಲಿರುವ ಲೋಪದ ಸಂಕ್ಷಿಪ್ತ ವಿವರ, ಚಿತ್ರ ಹಾಗೂ ಸ್ಥಳದ ಮಾಹಿತಿಯನ್ನು (ಗೂಗಲ್‌ ಲೊಕೇಷನ್‌) ಬೆಸ್ಕಾಂ ವಾಟ್ಸ್‌ ಆ್ಯಪ್‌ಗೆ ಕಳುಹಿಸಬಹುದು.
- ಸಿ.ಶಿಖಾ, ವ್ಯವಸ್ಥಾಪಕ ನಿರ್ದೇಶಕಿ, ಬೆಸ್ಕಾಂ

**

ಈ ಸಮಸ್ಯೆಗಳ ಕುರಿತು ವಾಟ್ಸ್‌ ಆ್ಯಪ್‌ ಮಾಡಿ

* ವಿದ್ಯುತ್‌ ತಂತಿಗಳು ತುಂಡಾಗಿರುವುದು

* ಕೇಬಲ್‌ಗಳ ಹೊರಕವಚ ಕಿತ್ತು ಹೋಗಿರುವುದು

*ಕಂಬಗಳು ವಾಲಿರುವುದು

* ತಂತಿಗಳು ತೀರಾ ಕೆಳಗೆನೇತಾಡುತ್ತಿರುವುದು

* ತಂತಿಗಳನ್ನು ಕೊಂಬೆಗಳು ಆವರಿಸಿರುವುದು

* ತಂತಿಗಳ ಮೇಲೆ ವಸ್ತುಗಳು ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.