ADVERTISEMENT

ಬೆಂಗಳೂರು | ‘ಭಗವದ್ಗೀತೆ ಬೋಧನೆ: ಸಂವಿಧಾನಕ್ಕೆ ವಿರುದ್ಧ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 16:17 IST
Last Updated 8 ಡಿಸೆಂಬರ್ 2025, 16:17 IST
   

ಬೆಂಗಳೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿರುವುದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕಾರ್ಯದರ್ಶಿ ಕೆ.ಪ್ರಕಾಶ್, ‘ರಾಜ್ಯದಿಂದ ಆಯ್ಕೆಯಾಗಿರುವ ಸಚಿವರು ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಸಂಪನ್ಮೂಲ, ಅಭಿವೃದ್ಧಿಯತ್ತ ಗಮನವಹಿಸುವುದಕ್ಕೆ ಆದ್ಯತೆ ನೀಡಬೇಕು. ಧಾರ್ಮಿಕ ಭಾವನೆಗಳನ್ನು ರಾಜಕೀಯವಾಗಿ ಬಳಸಲು ಅಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭಗವದ್ಗೀತೆಯನ್ನು ಪಠ್ಯದಲ್ಲಿ ಬೋಧಿಸಲು ಮಾಡಿದ ಪ್ರಯತ್ನಕ್ಕೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಈಗಿನ ಅವರ ಪತ್ರ ಹಿಂದಿನ ಅವರದೇ ನಿಲುವಿಗೆ ವ್ಯತಿರಿಕ್ತವಾಗಿದೆ’ ಎಂದು ತಿಳಿಸಿದ್ದಾರೆ.

‘ಭಗವದ್ಗೀತೆ, ಕುರ್‌ಆನ್, ಬೈಬಲ್ ಗ್ರಂಥಗಳನ್ನು ವೈಯಕ್ತಿಕವಾಗಿ ಓದಬಹುದು. ಅದರಲ್ಲಿ ತಮಗಿರುವ ಅಂಶಗಳನ್ನು ಮೌಲ್ಯಗಳೆಂದು ಪರಿಭಾವಿಸಬಹುದು ಮತ್ತು ಅನುಸರಿಸಲೂಬಹುದು. ಸಿಪಿಎಂ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ. ಎಲ್ಲ ಜಾತಿ, ಧರ್ಮ ಮತ್ತು ಧಾರ್ಮಿಕ ನಂಬಿಕೆಗಳಿಗೆ ಸೇರಿದ ವಿದ್ಯಾರ್ಥಿಗಳಿರುವ ಶೈಕ್ಷಣಿಕ ತರಗತಿಗಳಲ್ಲಿ ಒಂದು ಧರ್ಮದ ಗ್ರಂಥ ಬೋಧನೆ ಏನು ಪರಿಣಾಮ ಬೀರಲಿದೆ ಹಾಗೂ ಎಷ್ಟು ಸರಿ ಎಂಬುದುನ್ನು ಸಚಿವರು ಅರಿಯಬೇಕಿತ್ತು’ ಎಂದು ಹೇಳಿದ್ದಾರೆ.

ADVERTISEMENT

‘ಭಗವದ್ಗೀತೆ ಸಾರುವ ಮೌಲ್ಯಗಳು, ಸಂದೇಶಗಳ ಬಗ್ಗೆ ತೀವ್ರ ಟೀಕೆ, ಆಕ್ಷೇಪ ಇರುವಾಗ ಅದನ್ನು ಸಾರ್ವಕಾಲಿಕ ಮೌಲ್ಯ ಸಾರುವ ಗ್ರಂಥವೆಂದು ಹೇಗೆ ಭಾವಿಸಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.