
ಬೆಂಗಳೂರು: ‘ಭಗವದ್ಗೀತೆ ಮನೆಯಲ್ಲಿದ್ದರೆ ಬೇರೆ ಸಮಾಲೋಚಕರ ಅಗತ್ಯವಿಲ್ಲ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಮಲ್ಲೇಶ್ವರ ಬ್ರಾಹ್ಮಣ ಸಭಾ ಟ್ರಸ್ಟ್, ಮಲ್ಲೇಶ್ವರ ಸಿವಿಕ್ ಮ್ಯಾನೇಜ್‌ಮೆಂಟ್ ಕಮಿಟಿ ಸೋಮವಾರ ಆಯೋಜಿಸಿದ್ದ ಗೀತಾ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಭಗವದ್ಗೀತೆ ಭಗವಂತನಿಂದ ಉಕ್ತವಾದದ್ದು. ಅದನ್ನು ಓದಿ ಅರ್ಥೈಸಿಕೊಂಡರೆ ಸಾಕು. ಪ್ರತಿಯೊಬ್ಬರ ದ್ವಂದ್ವಗಳಿಗೆ ಪರಿಹಾರ ಇದರಲ್ಲಿದೆ. ಇಂದಿಗೂ ಶ್ರೀಕೃಷ್ಣ ಅತ್ಯುತ್ತಮ ಆಪ್ತ ಸಲಹೆಗಾರ ಎಂದರು.
ಇಂದಿನ ಜನಾಂಗ ಖಿನ್ನತೆ ಎಂದು ಮಾತ್ರೆೆಗಳನ್ನು ತೆಗೆದುಕೊಳ್ಳುವುದು, ಆತ್ಮಹತ್ಯೆೆಗೆ ಮುಂದಾಗುವುದನ್ನು ಕಾಣುತ್ತಿದ್ದೇವೆ. ಯಾವುದೇ ಕಾರಣಕ್ಕೂ ವಿಪರೀತ ಕ್ರಮಗಳಿಗೆ ಮುಂದಾಗದೆ ಭಗವದ್ಗೀತೆ ಪಠಣವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ. ಭೀಮೇಶ್ವರ ಜೋಶಿ ಮಾತನಾಡಿ, ‘ಭಗವದ್ಗೀತೆಯನ್ನು ಮನೆಯಲ್ಲಿ ಪೂಜೆಗೆ ಸೀಮಿತವಾಗಿರಿಸದೆ, ಪಠಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಃಖ ಮತ್ತು ಸಂತೋಷದಲ್ಲೂ ಭಗವದ್ಗೀತೆ ಬದುಕಿನ ಗೀತೆಯಾಗಬೇಕು’ ಎಂದು ಆಶಿಸಿದರು.
ನಿವೃತ್ತ ನ್ಯಾಯಮೂರ್ತಿ ಕೆ.ವಿ. ನರಸಿಂಹನ್, ಶೇಷಾದ್ರಿಪುರ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ವೂಡೇ ಪಿ. ಕೃಷ್ಣ, ಜ್ಯೋತಿಷಿ ಬಿ. ಎಸ್. ದ್ವಾರಕಾನಾಥ್, ಮಲ್ಲೇಶ್ವರ ಬ್ರಾಹ್ಮಣ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಪಾವಗಡ ಪ್ರಕಾಶ್ ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.