ADVERTISEMENT

ಭೋವಿ ಸಮಾಜಕ್ಕೆ ಪ್ರತ್ಯೇಕ ಗುಂಪು ರಚಿಸಿ: CMಗೆ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 14:01 IST
Last Updated 14 ಆಗಸ್ಟ್ 2025, 14:01 IST
ಭೋವಿ ಸಮಾಜಕ್ಕೆ ಒಳಮೀಸಲಾತಿಯಲ್ಲಿ ಪ್ರತ್ಯೇಕ ಗುಂಪು ಸೃಜಿಸಲು ಆಗ್ರಹಿಸಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು
ಭೋವಿ ಸಮಾಜಕ್ಕೆ ಒಳಮೀಸಲಾತಿಯಲ್ಲಿ ಪ್ರತ್ಯೇಕ ಗುಂಪು ಸೃಜಿಸಲು ಆಗ್ರಹಿಸಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು   

ಬೆಂಗಳೂರು: ಒಳಮೀಸಲಾತಿ ನೀಡುವ ಸಮಯದಲ್ಲಿ ನಿಖರ ಮತ್ತು ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಸೃಜಿಸಬೇಕು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಮನವಿ ಸಲ್ಲಿಸಿರುವ ಸ್ವಾಮೀಜಿ, ‘ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್‌ ವರದಿಯಲ್ಲಿರುವ ಲೋಪವನ್ನು ಸರಿಪಡಿಸಬೇಕು. ಜನಸಂಖ್ಯಾವಾರು ಮೀಸಲಾತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

ನ್ಯಾ. ನಾಗಮೋಹನದಾಸ್‌ ವರದಿಯ ಪುಟ 24ರಲ್ಲಿ ತಿಳಿಸಿರುವಂತೆ 2001–11ರ ಜನಸಂಖ್ಯೆ ದಶಕವಾರು ಬೆಳವಣಿಗೆಯು ಶೇ 22.31ರಷ್ಟಿದೆ. ಈ ಮಾನದಂಡದ ಪ್ರಕಾರ ಪರಿಶಿಷ್ಟ ಜನಾಂಗದ ಜನಸಂಖ್ಯೆ 2025ಕ್ಕೆ 1.35 ಕೋಟಿ ಆಗಬೇಕಿತ್ತು. ಆದರೆ, 1.7 ಕೋಟಿ ಎಂದು ವರದಿಯಲ್ಲಿ ತೋರಿಸಲಾಗಿದೆ. 2011ರಲ್ಲಿ 11.19 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದ ಭೋವಿ ಸಮುದಾಯ ಈಗ 15 ಲಕ್ಷಕ್ಕೆ ಏರಬೇಕಿತ್ತು. ಆದರೆ, ವರದಿಯಲ್ಲಿ 11.29 ಲಕ್ಷ ಎಂಬುದಾಗಿ ಉಲ್ಲೇಖಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ADVERTISEMENT

2011ರ ಜನಗಣತಿ ಮತ್ತು ನ್ಯಾ. ಸದಾಶಿವ ಆಯೋಗದ ಸಮೀಕ್ಷೆ ಏಕಕಾಲದಲ್ಲಿ ನಡೆದಿದ್ದರೂ ದತ್ತಾಂಶದಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬಂದಿತ್ತು ಎಂಬುದನ್ನು ಪುಟ ಸಂಖ್ಯೆ 51ರಲ್ಲಿ ವಿವರಿಸಲಾಗಿದೆ. ಹಾಗಾಗಿ ಪ್ರಸ್ತುತ ವರದಿಯ ದೋಷಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರದ 2026ರ ಜನಗಣತಿಯ ವರದಿ ಬರುವವರೆಗೆ ಕಾಯಬೇಕು ಎಂದು ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸಿ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ, ಆರ್ಥಿಕ, ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಅನುಸರಿಸಬೇಕು. ಭೋವಿ ಸಮುದಾಯ ಅತ್ಯಂತ ಕಡಿಮೆ ಅಬಿವೃದ್ಧಿ ಹೊಂದಿದ್ದರೂ ವರದಿಯಲ್ಲಿ ಮುಂದುವರಿದ ಗುಂಪಿಗೆ ಸೇರಿಸಲಾಗಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಉದ್ಯೋಗ ಸೂಚಕಗಳಿಗೂ ಮೀಸಲಾಗಿರುವ ಶೇಕಡವಾರು ಪ್ರಮಾಣಕ್ಕೂ ತಾಳೆ ಇಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಯ ಸುಮಾರು 7 ಲಕ್ಷ ಕುಟುಂಬಗಳು ಪಡಿತರ ಚೀಟಿಯನ್ನೇ ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೂ ಸಮೀಕ್ಷೆಗೆ ಪಡಿತರ ಚೀಟಿಯನ್ನೇ ಗುರುತಾಗಿ ಬಳಸಲಾಗಿದೆ. ಇದರಿಂದಾಗಿ ಪರಿಶಿಷ್ಟ ಜಾತಿಯ 30 ಲಕ್ಷ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಅದರಲ್ಲಿ 3.5 ಲಕ್ಷ ಜನರು ಭೋವಿ ಸಮಾಜದವರು ಎಂದು ವಿವರಿಸಿದ್ದಾರೆ. 

‘ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಿಯೋಗದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ, ಮುಖಂಡರಾದ ವಿ. ಹನುಮಂತಪ್ಪ, ರವಿ ಪೂಜಾರಿ, ಜಯಶಂಕರ, ಮುರಳೀಧರ ಬಂಡೆ, ಮಂಜುಳಾ, ಗೀತಾ, ತಿಪ್ಪಣ್ಣ ಒಡೆಯರಾಜು, ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.