
ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯಲ್ಲಿ ಮಕ್ಕಳು ಗಾಯನ–ನೃತ್ಯಕ್ಕೆ ಹೆಜ್ಜೆ ಹಾಕುವ ಜತೆಗೆ, ಫ್ಯಾಷನ್ ಶೋದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
‘ಗೋಲ್ಡ್ ವಿನ್ನರ್’ ಸಹಯೋಗದಲ್ಲಿ ನಾಗರಬಾವಿಯ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್‌ನಲ್ಲಿರುವ ಕಿಂಗ್ಸ್ ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ 35ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ, ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು. ಈ ಬಾರಿ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದಾಗಿ ಚಿಣ್ಣರ ಕಲರವ ಮಹಿಳೆಯರ ಸಂಭ್ರಮ ಹೆಚ್ಚಿಸಿತು.
ಇಂಪಾದ ಚಿತ್ರಗೀತೆಗಳು, ಮಕ್ಕಳ ಫ್ಯಾಷನ್ ಶೋ, ರ್‍ಯಾಂಪ್ ವಾಕ್, ರಸಪ್ರಶ್ನೆ, ‘ಜುಂಬಾ’ ನೃತ್ಯ, ಉಪನ್ಯಾಸ ಸೇರಿ ವಿವಿಧ ಚಟುವಟಿಕೆಗಳನ್ನು ಕಾರ್ಯಕ್ರಮ ಒಳಗೊಂಡಿತ್ತು. ಸಕ್ರಿಯವಾಗಿ ಪಾಲ್ಗೊಂಡಿದ್ದ ಮಹಿಳೆಯರು, ಚಿತ್ರಗೀತೆಗಳಿಗೆ ತಾವು ಧ್ವನಿಯಾಗುವ ಜತೆಗೆ ನೃತ್ಯವನ್ನೂ ಮಾಡಿದರು.
ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಸಿಒಒ ಕಿರಣ್ ಸುಂದರರಾಜನ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಕಾಂಗ್ರೆಸ್ ವಕ್ತಾರೆ ಕುಸುಮಾ ಎಚ್., ಕಿರುತೆರೆ ಕಲಾವಿದೆ ಶ್ಯಾಮ್ ಕುನ್ವಾರ್, ‘ಗೋಲ್ಡ್ ವಿನ್ನರ್’ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಸಿ.ಎಸ್. ಮಹೇಶ್, ಕಿಂಗ್ಸ್ ಕ್ಲಬ್ ವ್ಯವಸ್ಥಾಪಕ ನಿರ್ದೇಶಕ ಅಹ್ಮದ್ ಶಂಶುದ್ದೀನ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಫ್ಯಾಷನ್ ಶೋ: ಗಾಯಕಿ ಅನಘಾ ಅವರು ವಿವಿಧ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ನೆರೆದಿದ್ದ ಮಹಿಳೆಯರು ಕೂಡ ಕೆಲ ಸಾಲುಗಳನ್ನು ಗುನುಗಿದರು. ಈ ವೇಳೆ ಮಕ್ಕಳು ವೇದಿಕೆಯನ್ನೇರಿ ಡಾನ್ಸ್ ಮಾಡಿದರು. ಬಳಿಕ ನಡೆದ ಮಕ್ಕಳ ಫ್ಯಾಷನ್ ಶೋದಲ್ಲಿ ಬಣ್ಣ ಬಣ್ಣದ ಉಡುಗೆ ಧರಿಸಿ ಬಂದಿದ್ದ ಮಕ್ಕಳು, ಪ್ರೇಕ್ಷರತ್ತ ಕೈ ಬೀಸುತ್ತಾ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರು. 3ರಿಂದ 5 ವರ್ಷ, 6ರಿಂದ 10 ವರ್ಷ ಹಾಗೂ 11ರಿಂದ 15 ವರ್ಷವೆಂದು ವಿಭಾಗವಾರು ಆಯೋಜಿಸಲಾಗಿತ್ತು. ಮೋನಾ ಮತ್ತು ವಿದ್ಯಾ ಚಿರಾ ಅವರು ಈ ಫ್ಯಾಷನ್ ಶೋ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಡಬ್ಲ್ಯುಐಸಿಸಿಐ ಲೀಡರ್‌ಶಿಪ್ ಕೋಚಿಂಗ್ ಕೌನ್ಸಿಲ್‌ನ ಅಧ್ಯಕ್ಷೆ ಆಶಾ ಬಿರಾದಾರ್ ಅವರು ‘ಕೌಶಲದಿಂದ ಆದಾಯ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕೌಶಲ ವೃದ್ಧಿ ಹಾಗೂ ಆದಾಯ ಗಳಿಕೆಗೆ ಇರುವ ಅವಕಾಶಗಳ ಬಗ್ಗೆ ತಿಳಿಯಲು ಈ ಗೋಷ್ಠಿ ಸಹಕಾರಿಯಾಯಿತು.
ಲಕ್ಕಿ ವಿಜೇತರಲ್ಲಿ ಸುಜಾತಾ ಸುರೇಶ್ ಅವರು ₹15 ಸಾವಿರ ಮೌಲ್ಯದ ವಾಟರ್ ಪ್ಯೂರಿಫೈಯರ್ ತಮ್ಮದಾಗಿಸಿಕೊಂಡರೆ, ವಿಮಲಾ ಜೆ. ಅವರು ‘ಪ್ರಜಾವಾಣಿ ಸಿನಿ ಸಮ್ಮಾನ’ ಸಮಾರಂಭದ ಎರಡು ವಿವಿಐಪಿ ಪಾಸ್‌ಗಳನ್ನು ಪಡೆದುಕೊಂಡರು.
ಹೆಣ್ಣು ಮಕ್ಕಳು ಎಲ್ಲ ಪಾತ್ರ ನಿರ್ವಹಿಸುತ್ತಾರೆ. ಅವರಿಗೆ ಪ್ರೋತ್ಸಾಹ ಮತ್ತು ಸುರಕ್ಷಿತ ವಾತಾವರಣ ಅಗತ್ಯ. ಭೂಮಿಕಾ ಕ್ಲಬ್ ಮಹಿಳೆಯರಿಗೆ ಉತ್ತಮ ವೇದಿಕೆಯಾಗಿದೆ
–ಕುಸುಮಾ ಎಚ್. ಕಾಂಗ್ರೆಸ್ ವಕ್ತಾರೆ
ನಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ವಯಸ್ಸು ಅಡ್ಡಿಯಾಗದು. ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಎಲ್ಲವೂ ಸಾಧ್ಯ. ಭೂಮಿಕಾ ಕ್ಲಬ್ ಸದುಪಯೋಗ ಮಾಡಿಕೊಳ್ಳಿ
–ಶ್ಯಾಮ್ ಕುನ್ವಾರ್ ಕಿರುತೆರೆ ಕಲಾವಿದೆ
ಉತ್ಸಾಹ ಹೆಚ್ಚಿಸಿದ ಜುಂಬಾ ನೃತ್ಯ
ಫಿಟ್ನೆಸ್ ತಜ್ಞೆ ಚಂದನಾ ಲಕ್ಷ್ಮಿಕಾಂತ್ ಅವರು ‘ಜುಂಬಾ’ ನೃತ್ಯ ಪ್ರದರ್ಶನ ಪ್ರಸ್ತುತಪಡಿಸಿದರು. ಅವರ ಜತೆಗೆ ನೆರೆದಿದ್ದ ಪ್ರೇಕ್ಷಕರು ವಿವಿಧ ಗೀತೆಗಳಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು. ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದವರು ಈ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ವಿಶೇಷ. ಮಹಿಳೆಯರಿಗೆ ಅಡುಗೆ ತಯಾರಿ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಚೀಟಿ ಎತ್ತುವ ಮೂಲಕ ಪ್ರೇಕ್ಷಕರಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಪ್ರೇಕ್ಷಕರೇ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿದ ಪ್ರೇಕ್ಷಕರು ಅಚ್ಚರಿಯ ಉಡುಗೊರೆಗಳನ್ನೂ ಪಡೆದು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.